ತುಮಕೂರು: ಇದೇ ಮೊದಲ ಬಾರಿಗೆ ಕಲ್ಪತರುನಾಡು ತುಮಕೂರಿನ ವಸಂತನರಸಾಪುರ ಹಾಗೂ ನಾಮದ ಚಿಲುಮೆಯ ಪ್ರಕೃತಿ ಮಡಿಲಲ್ಲಿ ಸ್ಕೇಟಿಂಗ್ ಸ್ಪರ್ಧಾಳುಗಳ ಸದ್ದು ಜೋರಾಗಿದೆ. ಬೆಂಗಳೂರಿನಂಥ ಮಹಾನಗರಗಳಲ್ಲಿ ಕಂಡು ಬರುತ್ತಿದ್ದ ಸ್ಕೇಟಿಂಗ್ ಪಟುಗಳು ತುಮಕೂರಿನಲ್ಲಿ ಸದ್ದು ಮಾಡುವ ಮೂಲಕ ತಮ್ಮ ಉತ್ಸಾಹವನ್ನು ತೋರಿದರು.
ತುಮಕೂರಿನ ಸಮೀಪವಿರುವ ಉದ್ಯೋಗಿಗಳು, ಬ್ಯಸಿನೆಸ್ ಮ್ಯಾನ್‌ಗಳಿಂದ ತುಂಬಿರುತ್ತಿದ್ದ ವಸಂತನರಸಾಪುರ ಕೈಗಾರಿಕ ಪ್ರದೇಶ, ಸ್ಕೇಟಿಂಗ್ ಸ್ಪರ್ಧಾಳುಗಳಿಂದ ತುಂಬಿ ತುಳುಕುತ್ತಿತ್ತು. 60 ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ 2022 ತುಮಕೂರಿನಲ್ಲಿ ಆಯೋಜನೆ ಮಾಡಲಾಗಿತ್ತು. ಸ್ಕೇಟಿಂಗ್ ಸ್ಪರ್ಧೆಗೆ ನಿನ್ನೆ ಸಿದ್ದಗಂಗಾ ಮಠದ ಶ್ರೀಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು.
ನುರಿತ ಕೌಶಲ್ಯ ಇಲ್ಲದಿದ್ದರೆ ಅಪಾಯ ಹೆಚ್ಚು: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಂದ ನೂರಾರು ಕ್ರೀಡಾಪಟುಗಳು ಈ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಿದ್ದರು. ಸ್ಕೇಟಿಂಗ್ ತುಂಬಾ ಕಷ್ಟಕರವಾದ ಸ್ಪರ್ಧೆ. ನುರಿತ ಕೌಶಲ್ಯ ಇಲ್ಲದಿದ್ದರೆ ಅಪಾಯ ಹೆಚ್ಚು. ಆದರೆ ತುಮಕೂರಿನಂತಹ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧಾಳುಗಳು ಭಾಗವಹಿಸಿದ್ದರು.
ತುಮಕೂರು ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಈ ಬಾರಿ ಬೆಂಗಳೂರು ಸೇರಿದಂತೆ ತುಮಕೂರಿನಲ್ಲಿಯೂ ಡಿಸೆಂಬರ್ 14 ಮತ್ತು 15 ರಂದು ಎರಡು ದಿನ 60ನೇ ನ್ಯಾಷನಲ್ ರೋಲರ್ ಸ್ಕೇಟಿಂಗ್ ಚಾಂಪಿಯನ್ಶಿಪ್ ನಡೆಸುತ್ತಿದ್ದು, ಬೆಂಗಳೂರಿನಲ್ಲಿ ಇದೇ ಡಿಸೆಂಬರ್ 11 ರಿಂದ 22 ರವರೆಗೆ ಕಾರ್ಯಕ್ರಮ ನಡೆಯಲಿದೆ. ಇದರ ಅಂಗವಾಗಿ ತುಮಕೂರಿನಲ್ಲಿ ಎರಡು ಭಾಗವಾಗಿ ಕಾರ್ಯಕ್ರಮಗಳನ್ನು ತೆಗೆದುಕೊಂಡಿದ್ದು, ಒಂದು ಡೌನ್ ಹಿಲ್ ಮತ್ತು ಆಲ್ ಪೇನ್ ಎರಡು ಭಾಗಗಳಲ್ಲಿ ದೇಶದ ಸುಮಾರು 26 ರಾಜ್ಯಗಳಿಂದ 120 ಕ್ಕೂ ಹೆಚ್ಚು ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು.
ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಿಗೆ ಆಯ್ಕೆ: ಇನ್ನು ಎರಡು ದಿನಗಳಿಂದ ನಡೆದ 60ನೇ ನ್ಯಾಷನಲ್ ರೋಲರ್ ಸ್ಕೇಟಿಂಗ್ ಚಾಂಪಿಯನ್ಶಿಪ್ ಕ್ರೀಡಾ ಕೂಟದಲ್ಲಿ ಕರ್ನಾಟಕದ ಸ್ಕೇಟಿಂಗ್ ರಾಷ್ಟ್ರೀಯ ಕ್ರೀಡಾಪಟು ಕಿರಣ್ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದರೆ, ಜೂನಿಯರ್ ವಿಭಾಗದಲ್ಲಿ ಸಿರಿ ಸಾನಿಧ್ಯ ಕಂಚಿನ ಪದಕ ಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಚಾಂಪಿಯನ್ ಶಿಪ್ ಜೊತೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಿಗೆ ಆಯ್ಕೆ ಪ್ರಕ್ರಿಯೆ ಸಹ ನಡೆಸಲಾಯಿತು.