ತುಮಕೂರು: ಜಿಲ್ಲೆಯ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಿಧ ಕಾರಣಗಳಿಂದ ಮೂರು ಪ್ರತ್ಯೇಕ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಸಾಲಬಾಧೆಯಿಂದ ಹಾಗು ಅನಾರೋಗ್ಯದಿಂದ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮತ್ತೊಂದೆಡೆ ವಿದ್ಯಾರ್ಥಿನಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಮಂಗಳವಾರ ರಾತ್ರಿ ವೇಳೆ ತನ್ನ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದಲ್ಲಿ 17 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದವಳು.
ಈಕೆ ಕೊರಟಗೆರೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ನಿನ್ನೆ ರಾತ್ರಿ ಕೊಠಡಿಯೊಳಗೆ ವ್ಯಾಸಂಗ ಮಾಡಲು ಹೋದವಳು ಬೆಳಗ್ಗೆ 8 ಗಂಟೆಯಾದ್ರೂ ಹೊರಗೆ ಬಾರದ ಹಿನ್ನೆಲೆ ಒಳಗೆ ಹೋಗಿ ನೋಡಿದಾಗ ಆಕೆ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆದರೆ, ಆತ್ಮಹತ್ಯೆಗೆ ಯಾವುದೇ ರೀತಿಯ ನಿಖರ ಕಾರಣ ತಿಳಿದುಬಂದಿಲ್ಲ.
ಮತ್ತೊಂದೆಡೆ ಅನೇಕ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಗುಣಮುಖವಾಗದ ಹಿನ್ನೆಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಂಬಾಡಿ ಗ್ರಾಮದ ಸತ್ಯನಾರಾಯಣಶೆಟ್ಟಿ ಅವರ ಪತ್ನಿ ತ್ರೈಜತಿ (40) ಬಾರದಲೋಕಕ್ಕೆ ತೆರಳಿದವರು.
ಇನ್ನೊಂದೆಡೆ ವ್ಯಕ್ತಿಯೊಬ್ಬ ಸಾಲಕ್ಕೆ ಹೆದರಿ ತನ್ನ ಜಮೀನಿನಲ್ಲಿರುವ ಗುಡಿಸಿಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಿ ಎಸ್ ದುರ್ಗ ಹೋಬಳಿಯ ಮುದ್ದಯ್ಯನಪಾಳ್ಯದ ಮರಿಯಣ್ಣನ ಮಗ ದಾಸೇಗೌಡ(29) ಮೃತ ವ್ಯಕ್ತಿ. ದಾಸೇಗೌಡ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದನು. ಈ ಮೂರು ಪ್ರಕರಣಗಳು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಓದಿ: ಬೊಮ್ಮಾಯಿ ಕನಸಿನ ಭದ್ರಾ ಮೇಲ್ದಂಡೆ ಯೋಜನೆ ಆಮೆಗತಿ.. ಈ ಪ್ರಾಜೆಕ್ಟ್‌ಗೆ ವೇಗ ನೀಡುವರೇ ಸಿಎಂ!?