ತುಮಕೂರು: ರಾಜ್ಯದ ವಿವಿಧೆಡೆ ಅಪಘಾತ ಮತ್ತು ಆಕಸ್ಮಿಕ ಘಟನೆಗಳು ಸಂಭವಿಸಿದ್ದು, ಸುಮಾರು 15 ಜನ ಸಾವನ್ನಪ್ಪಿದ್ದಾರೆ. ತುಮಕೂರಿನಲ್ಲಿ ಐವರು, ಬೆಳಗಾವಿಯಲ್ಲಿ ನಾಲ್ವರು ಮತ್ತು ಮಡಿಕೇರಿಯಲ್ಲಿ ಆರು ಜನ ಮೃತಪಟ್ಟಿರುವುದಾಗಿ ವರದಿಯಾಗಿದೆ.
ತುಮಕೂರಿನಲ್ಲಿ ಭೀಕರ ಅಪಘಾತ: ಖಾಸಗಿ ಬಸ್ ಹಾಗೂ ಇನೋವಾ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ಇಲ್ಲಿನ ಹಿರೇಹಳ್ಳಿ ಸಮೀಪ ಘಟನೆ ಸಂಭವಿಸಿದ್ದು, ತುಮಕೂರು ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಡಿವೈಡರ್'ಗೆ ಡಿಕ್ಕಿ ಹೊಡೆದು ಎದುರುನಿಂದ ಬೆಂಗಳೂರು ಕಡೆಯಿಂದ ತುಮಕೂರು ಕಡೆಗೆ ಬರುತ್ತಿದ್ದ ಇನೋವಾ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಇನೋವಾ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಒಗ್ಗೂಡಿ ರಕ್ಷಣಾ ಕಾರ್ಯ ಕೈಗೊಂಡರು. ಬಳಿಕ ಪೊಲೀಸರಿಗೆ ಮಾಹಿತಿ ರವಾನಿಸಿದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತದೇಹಗಳನ್ನು ಕಾರಿನಿಂದ ಹೊರ ತೆಗೆದರು. ಬಳಿಕ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದರು. ಗಾಯಾಳುಗಳಿಂದ ಪೊಲೀಸರು ಮೃತರ ಸಂಬಂಧಿಕರ ವಿವರ ಪಡೆದು ಮಾಹಿತಿ ರವಾನಿಸಿದರು.
ಮೃತಪಟ್ಟವರನ್ನು ಚಳ್ಳಕೆರೆ ತಾಲೂಕಿನ ಮೆಡಿಕಲ್ ವಿಭಾಗದ ಕೆಎಸ್ಸಿಸಿಟಿ ಮ್ಯಾನೇಜರ್ ಗೋವಿಂದ ನಾಯಕ್ (58), ಗೋವಿಂದ ನಾಯಕ್ ಪತ್ನಿ ತಿಪ್ಪಮ್ಮ (52), ಕುಣಿಗಲ್ ನಿವಾಸಿ ಚಾಲಕ ರಾಜೇಶ್ (35), 6ನೇ ತರಗತಿ ವಿದ್ಯಾರ್ಥಿ ದಿನೇಶ್(12), ಮತ್ತು ಪಿಂಕಿ (15) ಎಂದು ಗುರುತಿಸಲಾಗಿದೆ. ಇನ್ನುಳಿದಂತೆ ಗಾಯಗೊಂಡವರನ್ನು ಕಡೂರು ನಿವಾಸಿ ಶ್ರೀಕಂಠಪ್ಪ(78), ದಾವಣಗೆರೆ ನಿವಾಸಿ ಮಂಜುನಾಥ್ (45), ಶಿರಾ ನಿವಾಸಿ ಬುಡ್ಗಮ್ಮ (45) ಮತ್ತು ಮಂಜುನಾಥ್ (41) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಮಳವಳ್ಳಿ ಬಳಿ ಭೀಕರ ರಸ್ತೆ ಅಪಘಾತ.. ಇಬ್ಬರು ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
ಅಪಘಾತದಲ್ಲಿ ಆರು ಜನ ಸಾವು: ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಮಂಗಳೂರಿನಿಂದ ಮಡಿಕೇರಿಯತ್ತ ಬರುತ್ತಿದ್ದ ಸರ್ಕಾರಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಆರು ಜನ ಸಾವನ್ನಪ್ಪಿರುವ ಘಟನೆ ಮಡಿಕೇರಿ ತಾಲೂಕಿನ ಸಂಪಾಜೆಯಲ್ಲಿ ನಡೆದಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಇದ್ದವರೆಲ್ಲ ಮೂಲತಃ ಮಂಡ್ಯ ಜಿಲ್ಲೆಯವರು ಎಂದು ತಿಳಿದು ಬಂದಿದೆ. ಮಳವಳ್ಳಿ ತಾಲೂಕಿನವರಾದ ಕುಮಾರ (35), ಶೀಲಾ (29), ಪ್ರಿಯಾಂಕ (42), ಮಕ್ಕಳಾದ ಮನಸ್ವಿ (8), ಯಶಸ್ ಗೌಡ (12), ಮಿಷಿಕಾ (ಒಂದೂವರೆ ವರ್ಷ) ಮೃತಪಟ್ಟವರು. ಗಂಭೀರ ಗಾಯಗೊಂಡ ಮಂಜುನಾಥ ಎಂಬುವರು ಮಂಗಳೂರು ಆಸ್ಪತ್ರೆ ಹಾಗೂ ಬಿಯಾನ್ ಗೌಡ ಎಂಬುವರನ್ನು ಚಿಕಿತ್ಸೆಗೆ ಕೆವಿಜಿ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಾಲ್ವರು ಸ್ನೇಹಿತರು ನೀರುಪಾಲು: ಈಜಲು ಹೋಗಿದ್ದ ನಾಲ್ವರು ಸ್ನೇಹಿತರು ಘಟಪ್ರಭಾ ನದಿಯಲ್ಲಿ ಮುಳುಗಿ ನೀರು ಪಾಲಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ದೂಪದಾಳ ಗ್ರಾಮದ ಬಳಿ ಶುಕ್ರವಾರ ನಡೆದಿದೆ. ಮೃತರನ್ನು ಸಂತೋಷ ಬಾಬು ಇಟಗಿ (18), ಅಜಯ್ ಬಾಬು ಜೋರೆ (18), ಕೃಷ್ಣಾ ಬಾಬು ಜೋರೆ (22) ಮತ್ತು ಆನಂದ ಕೋಕರೆ (19) ಎಂದು ಗುರುತಿಸಲಾಗಿದೆ. ಮೃತಪಟ್ಟ ನಾಲ್ವರು ಯುವಕರು ಉತ್ತರ ಕನ್ನಡದ ಮುಂಡಗೋಡ ತಾಲೂಕಿನ ಹಿರಿಗೆರೆ ಗ್ರಾಮದವರು ಎಂಬ ಮಾಹಿತಿ ಲಭ್ಯವಾಗಿದೆ. ಘಟಪ್ರಭಾದ ಬಾರ್‌ವೊಂದರಲ್ಲಿ ಇವರು ಕೆಲಸ ಮಾಡುತ್ತಿದ್ದರು. ರಜೆ ಇದ್ದುದರಿಂದ ಈಜಲು ಬಂದಿದ್ದರು ಎಂದು ತಿಳಿದುಬಂದಿದೆ. ಘಟಪ್ರಭಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.