ತುಮಕೂರು: ರಾಜ್ಯದಲ್ಲಿ ಸುಮಾರು 110 ಮಂದಿ ಪಿಎಫ್ಐ ಮುಖಂಡರನ್ನು ಬಂಧಿಸಲಾಗಿದೆ. ಕೆಲವೊಂದು ಕಡೆ ಪಿಎಫ್ಐ ಕಛೇರಿಯನ್ನು ಬೀಗ ಮುದ್ರೆ ಮಾಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎನ್ಐಎ ತನಿಖೆ ನಡೆಸುತ್ತಿದೆ. ಈ ವೇಳೆ ಲ್ಯಾಪ್ಟ್ಯಾಪ್ ಹಾಗೂ ಕೆಲ ವಸ್ತುಗಳು ಸಿಕ್ಕಿವೆ. ಅದರಲ್ಲಿ ಏನೇನಿದೆ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ. ತುಮಕೂರಿನಲ್ಲಿ ಸಹ ಓರ್ವ ಪಿಎಫ್ಐ ಜಿಲ್ಲಾಧ್ಯಕ್ಷನನ್ನು ಬಂಧಿಸಲಾಗಿದೆ. ಇಲ್ಲಿ ಯಾವುದೇ ಕಚೇರಿ ಇಲ್ಲ. ಈಗಾಗಲೇ ಅವರ ಪರ್ಸನಲ್ ಬ್ಯಾಂಕ್ ಅಕೌಂಟ್ಗಳನ್ನು ಪರಿಶೀಲಿಸಲಾಗುತ್ತಿದೆ. ಅಲ್ಲದೇ, ಬಂಟ್ವಾಳದಲ್ಲಿ ಪಿಎಫ್ಐ ಟ್ರೈನಿಂಗ್ ಕಚೇರಿಯನ್ನ ಸೀಜ್ ಮಾಡಲಾಗಿದೆ ಎಂದರು.
ಆರ್ಎಸ್ಎಸ್ ಬ್ಯಾನ್ ಮಾಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಸಿದ್ದರಾಮಯ್ಯಗೆ ಪಿಎಫ್ಐ ಬ್ಯಾನ್ ಮಾಡಿದ್ದು ಇಷ್ಟ ಇಲ್ಲ. ಅವರಿಗೆ ದೇಶದ ಹಿತದೃಷ್ಟಿಗಿಂತ ವೋಟಿನ ಹಿತದೃಷ್ಟಿ ಮುಖ್ಯ. ಇದು ಚುನಾವಣಾ ವರ್ಷ. ಅವರ ವೋಟ್ ಬ್ಯಾಂಕ್ಗೆ ಹಾನಿಯಾಗದ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಪಿಎಫ್ಐ ಬ್ಯಾನ್ ಮಾಡಬಾರದಿತ್ತು ಅಂತಾ ಹೇಳುವ ಬದಲು ಆರ್ಎಸ್ಎಸ್ ಯಾಕೆ ಬ್ಯಾನ್ ಮಾಡಲ್ಲ ಎಂದು ಪ್ರಶ್ನಿಸಿದ್ದಾರೆ. ಆರ್ಎಸ್ಎಸ್ ಒಂದು ದೇಶಭಕ್ತ ಸಂಘಟನೆ. ದೇಶದ ಎಲ್ಲಾ ಜನ ಇದನ್ನು ಸ್ವೀಕಾರ ಮಾಡಿದ್ದಾರೆ. ದೇಶಕ್ಕೆ ಪೂರಕವಾಗಿ ಬದುಕವಂತಹ ವ್ಯಕ್ತಿತ್ವಗಳನ್ನು ಪ್ರತಿನಿತ್ಯ ಆರ್ಎಸ್ಎಸ್ ಬೆಳೆಸುತ್ತಿದೆ. ಹಾಗಾಗಿ ಆರ್ಎಸ್ಎಸ್ ಪಿಎಫ್ಐಗೂ ತಾಳೆ ಹಾಕುವಂತಹದ್ದು ಅವರ ಕೆಟ್ಟ ಮನಸ್ಥಿತಿಗೆ ಒಂದು ಉದಾಹರಣೆ. ಇಂತಹ ವೋಲೈಕೆ ರಾಜಕಾರಣದಿಂದಲೇ ಅವರ ಪಕ್ಷ ದೇಶದಲ್ಲಿ ಮಣ್ಣು ಪಾಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪಿಎಫ್ಐ ಬಂಧಿತರ ಮೊಬೈಲ್ ರಿಟ್ರೀವ್: ಸ್ಫೋಟಕ ಅಂಶಗಳು ಬಹಿರಂಗ