ಕಾರವಾರ: ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯನ್ನು ಜೂನ್ 25ರಿಂದ ಜುಲೈ 4ರವರೆಗೆ ಜಿಲ್ಲೆಯಾದ್ಯಂತ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು ಪರೀಕ್ಷೆ ನಡೆಯುವ ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತೆ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕೆ. ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಎಸ್ಎಸ್ಎಲ್ಸಿ ಪರೀಕ್ಷಾ ಪೂರ್ವ ಸಿದ್ದತೆ ಕುರಿತು ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್, ಕೈಗಳಿಗೆ ಹಾಕಲು ಸ್ಯಾನಿಟೈಸರ್ ನ್ನು ನೇರವಾಗಿ ಪರೀಕ್ಷಾ ಕೊಠಡಿಗಳಿಗೆ ಕಳುಹಿಸಲಾಗುತ್ತಿರುವುದರಿಂದ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುವಂತೆ ತಿಳಿಸಿದರು.
ಕಡ್ಡಾಯವಾಗಿ ವಿದ್ಯಾರ್ಥಿಗಳು ಮಾಸ್ಕ್ ಧರಿಸಬೇಕು: ಬೇರೆ ಜಿಲ್ಲೆಯ ಪರೀಕ್ಷಾ ಕೇಂದ್ರದಿಂದ ಆಗಮಿಸಲಿರುವ ವಿದ್ಯಾರ್ಥಿಗಳು ಹೊಸದಾಗಿ ಪ್ರವೇಶ ಪತ್ರ ತರದೇ ಇರುವುದರಿಂದ ಬಂದಿರುವ ಲಿಸ್ಟ್ನ್ನು ಪರಿಶೀಲಿಸಿ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಬೇಕು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಲು ತಿಳಿಸಬೇಕು. ಮುಖ್ಯ ಅಧೀಕ್ಷಕರು 200 ಮಾಸ್ಕ್ ಇಟ್ಟುಕೊಳ್ಳಬೇಕು ಮತ್ತು ಪ್ರತಿ ಕೊಠಡಿಯನ್ನು ಸ್ಯಾನಿಟೈಜೇಶನ್ ಮಾಡಬೇಕು ಎಂದು ತಿಳಿಸಿದರು.
200 ಮೀಟರ್ ನಿಷೇಧಿ ಪ್ರದೇಶ ಘೋಷಣೆ:
ಪರೀಕ್ಷಾ ದಿನದಂದು ಕೇಂದ್ರದ ಸುತ್ತಮುತ್ತಲೂ 200 ಮೀಟರ್ ನಿಷೇಧಿ ಪ್ರದೇಶವೆಂದು ಘೋಷಿಸಲಾಗುತ್ತಿದೆ. ಈ ವ್ಯಾಪ್ತಿಯಲ್ಲಿ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಗೆ ನೇಮಕೊಂಡ ಅಧಿಕಾರಿ ಹಾಗೂ ಸಿಬ್ಬಂದಿ ಹೊರತುಪಡಿಸಿ ಉಳಿದ ವ್ಯಕ್ತಿಗಳಿಗೆ ಪ್ರವೇಶ ನಿಷೇಧವಿರುತ್ತದೆ. ಅಲ್ಲದೇ ಈ ವ್ಯಾಪ್ತಿಯಲ್ಲಿ ಝೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಆದೇಶ ಹೊರಡಿಸುವುದಾಗಿ ಮತ್ತು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಸಹ ಕಲ್ಪಿಸಲಾಗುವುದೆಂದು ತಿಳಿಸಿದರು.