ಶಿವಮೊಗ್ಗ: ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬಳು ನಡು ರಸ್ತೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಇಂದು ಬೆಳಗಿನ ಜಾವ ತೀರ್ಥಹಳ್ಳಿ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ದ್ಯಾಮನಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಕಳ್ಳಿ ಗ್ರಾಮದ ಮಹಿಳೆಯೊಬ್ಬರು ಹೆರಿಗೆಗೆಂದು ತೀರ್ಥಹಳ್ಳಿಯ ತಾಲೂಕು ಆಸ್ಪತ್ರೆಗೆ ಬಂದಿದ್ದರು. ಆದರೆ ಕೊರೊನಾ ಹಿನ್ನೆಲೆ ಇಲ್ಲಿನ ಹೆರಿಗೆ ವಿಭಾಗ ಸೀಲ್ ಡೌನ್ ಆಗಿದ್ದು, ಸ್ತ್ರೀ ರೋಗ ತಜ್ಞರು ಕ್ವಾರಂಟೈನ್ ಆಗಿದ್ದಾರೆ. ಇದರಿಂದ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯವರು ಖಾಸಗಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದಾರೆ. ಇಲ್ಲಿನ ಖಾಸಗಿ ಆಸ್ಪತ್ರೆಗೆ ಹೋದಾಗ ಮೊದಲು ಸರ್ಕಾರಿ ಆಸ್ಪತ್ರೆಯ ಕೇಸ್ ಎಂದು ನಿರ್ಲಕ್ಷ್ಯ ಮಾಡಿ, ನಂತರ ಒತ್ತಾಯ ಮಾಡಿದ ಮೇರೆಗೆ ಕೊರೊನಾ ಪರೀಕ್ಷೆ ನಡೆಸಿಕೊಂಡು ಬರುವಂತೆ ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ.
ಈ ನಡುವೆ ಗರ್ಭಿಣಿ ನೋವಿನಿಂದ ಬಳಲುತ್ತಿದ್ದು, ಮಹಿಳೆಯನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಬರುವಾಗ ತೀರ್ಥಹಳ್ಳಿ ಪಟ್ಟಣದ ಗಾಂಧಿ ಚೌಕ್ ಬಳಿ ಕಾರಿನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆ ವೈದ್ಯರು ಮಾನವೀಯತೆ ದೃಷ್ಟಿಯಿಂದ ಮಹಿಳೆಯನ್ನು ಜನರಲ್ ವಾರ್ಡ್ನಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ.