ಬೆಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಮೆ ಇರುವ ಸ್ಥಳವನ್ನು ಧಾರ್ಮಿಕ ಸ್ಥಳ ಎಂದು ಪರಿಗಣಿಸಲಾಗದು ಎಂದು ಹೈಕೋರ್ಟ್ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
ನಗರದ ಎಂಜಿ ರಸ್ತೆಯಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಆರಂಭಿಸಿರುವ ಟಾನಿಕ್ ಮದ್ಯದಂಗಡಿಗೆ ಲೈಸೆನ್ಸ್ ನೀಡಿರುವ ಕ್ರಮ ಸರಿಯಲ್ಲ ಎಂದು ಆಕ್ಷೇಪಿಸಿ ವಕೀಲ ಎ ವಿ ಅಮರನಾಥನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಅಮರನಾಥನ್ ಅವರು ವಾದಿಸಿ, ಧಾರ್ಮಿಕ ಕೇಂದ್ರಗಳಿಂದ ನೂರು ಮೀಟರ್ ಅಂತರದಲ್ಲಿ ಮದ್ಯಂಗಡಿಗಳಿಗೆ ಪರವಾನಿಗೆ ನೀಡುವುದು ಅಬಕಾರಿ ನಿಯಮಗಳಿಗೆ ವಿರುದ್ಧವಾಗಿದೆ. ಗಾಂಧಿ ಪ್ರತಿಮೆಯನ್ನು ಸಾರ್ವಜನಿಕರು ನಿರ್ದಿಷ್ಟ ದಿನಗಳಂದು ಪೂಜಿಸುತ್ತಾರೆ. ಹೀಗಾಗಿ ಪ್ರತಿಮೆ ಇರುವ ಸ್ಥಳವನ್ನು ಧಾರ್ಮಿಕ ಕೇಂದ್ರವಾಗಿ ಪರಿಗಣಿಸಬಹುದು ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಸಾರ್ವಜನಿಕರು ನಿರ್ದಿಷ್ಟ ದಿನಗಳಲ್ಲಿ ಪೂಜಿಸುತ್ತಾರೆ ಎಂಬ ಅಂಶದ ಆಧಾರದ ಮೇಲೆ ಗಾಂಧಿ ಪ್ರತಿಮೆ ಇರುವ ಪ್ರದೇಶವನ್ನು ಧಾರ್ಮಿಕ ಕೇಂದ್ರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು. ಅಲ್ಲದೇ, ಗಾಂಧಿ ಪ್ರತಿಮೆ ಎದುರು ಟಾನಿಕ್ ಮದ್ಯದಂಗಡಿಗೆ ಪರವಾನಿಗೆ ನೀಡಿರುವ ಕ್ರಮ ಕಾನೂನಾತ್ಮಕವಾಗಿ ಸರಿಯಲ್ಲ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿ ಆದೇಶಿಸಿತು.
ಪ್ರಕರಣದ ಹಿನ್ನೆಲೆ : ಎಂಜಿ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಟಾನಿಕ್ ಹೆಸರಿನ ಮದ್ಯದಂಗಡಿಗೆ ಲೈಸೆನ್ಸ್ ನೀಡಿರುವುದು ಸರಿಯಾದ ಕ್ರಮವಲ್ಲ. ಗಾಂಧಿ ತಮ್ಮ ತತ್ವಗಳಲ್ಲಿ ಮದ್ಯವನ್ನು ವಿರೋಧಿಸಿದ್ದರು. ಹೀಗಾಗಿ, ಮದ್ಯದಂಗಡಿ ತೆರವು ಮಾಡಲು ನಿರ್ದೇಶಿಸಬೇಕು ಎಂದು ಕೋರಿ ವಕೀಲ ಅಮರನಾಥನ್ ಪಿಐಎಲ್ ಸಲ್ಲಿಸಿದ್ದರು.
ಹಾಗೆಯೇ ಮದ್ಯದಂಗಡಿಯು ಕೇಂದ್ರ ಡಿಸಿಪಿ ಕಚೇರಿಯಿಂದ ಮತ್ತು ಸೇಂಟ್ ಮಾರ್ಥಾಸ್ ಚರ್ಚ್‌ನಿಂದ 20-30 ಮೀಟರ್‌ನಲ್ಲಿದೆ ಎಂದು ಆರೋಪಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್, ಸರ್ವೇ ಮಾಡಿ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶಿಸಿತ್ತು. ಸರ್ವೇ ವರದಿಯಲ್ಲಿ ಡಿಸಿಪಿ ಕಚೇರಿ 126 ಮೀಟರ್ ಹಾಗೂ ಚರ್ಚ್ 144 ಮೀಟರ್ ದೂರದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಈ ಹಿನ್ನೆಲೆ ಗಾಂಧಿ ಪ್ರತಿಮೆಯನ್ನು ಜನರು ಆರಾಧಿಸುವುದರಿಂದ ಆ ಜಾಗವನ್ನು ಧಾರ್ಮಿಕ ಕೇಂದ್ರವಾಗಿ ಪರಿಗಣಿಸುವಂತೆ ಅರ್ಜಿದಾರರ ಪರ ವಕೀಲರು ಕೋರಿದ್ದರು.