ಬೆಂಗಳೂರು: ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಹಾಗೂ ಮ್ಯಾಜಿಸ್ಟ್ರೇಟ್ ತನಿಖೆ ಚುರುಕುಗೊಂಡಿದೆ. ಈ ಬೆನ್ನಲ್ಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಮತ್ತು ಡಿ.ಜೆ.ಹಳ್ಳಿ ಪೊಲೀಸ್ ಠಾಣೆ, ಗಲಭೆ ನಡೆದ ಘಟನಾ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಗಲಭೆ ಸಂಭವಿಸಿದಾಗ ಸಿದ್ದರಾಮಯ್ಯ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದರು. ಈ ಹಿನ್ನೆಲೆ ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಶ್ರೀನಿವಾಸ್ ಮೂರ್ತಿ ಅವರ ನಿವಾಸವನ್ನು ವೀಕ್ಷಣೆ ಮಾಡಿ ಮಾಹಿತಿ ಪಡೆದುಕೊಂಡರು. ಜೊತೆಗೆ ಡಿಸಿಪಿ ಶರಣಪ್ಪ ಸೇರಿದಂತೆ ಪೊಲೀಸ್ ಅಧಿಕಾರಿಗಳ ಜೊತೆ ಸಿದ್ದರಾಮಯ್ಯ ಮಾತುಕತೆ ನಡೆಸಿ, ಘಟನೆಯ ಬಗ್ಗೆ ವಿವರ ಪಡೆದುಕೊಂಡರು.
ಘಟನಾ ಸ್ಥಳ ವೀಕ್ಷಣೆ ಬಳಿಕ ಅರ್ಧ ಗಂಟೆ ಡಿ.ಜೆ. ಹಳ್ಳಿ ಠಾಣೆಯಲ್ಲಿ ಪೊಲೀಸರ ಜತೆ ಸಿದ್ದರಾಮಯ್ಯ ಚರ್ಚೆ ಮಾಡಿದರು. ನಂತರ ಸಿದ್ದರಾಮಯ್ಯ ಮಾತನಾಡಿ, ಡಿ.ಜೆ ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ನಡೆದಾಗ ನಾನು ಆಸ್ಪತ್ರೆಯಲ್ಲಿದ್ದೆ, ಹೀಗಾಗಿ ಇಂದು ಬಂದು ಪರಿಶೀಲಿಸಿದ್ದೇನೆ. ಗಲಭೆಯಲ್ಲಿ ನಾಲ್ಕು ಜನ ಸತ್ತಿದ್ದಾರೆ. ಸದ್ಯ ಪ್ರಕರಣದ ಕುರಿತು ತನಿಖೆ ನಡೀತಿದೆ. ಈ ಘಟನೆ ಮುಂಚೆ ನವೀನ್ ಎಂಬಾತ ಪ್ರವಾದಿ ಮೇಲೆ ಅವಹೇಳನಕಾರಿಯಾಗಿ ಆರು ಗಂಟೆಗೆ ಪೋಸ್ಟ್ ಹಾಕಿದ್ದ. ಈ ಪೋಸ್ಟ್ ಸಂಬಂಧ
7.45ಕ್ಕೆ ಡಿ.ಜೆ ಹಳ್ಳಿ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಆದರೆ ಒಬ್ಬ ದೂರು ಕೊಡಲು ಬಂದಾಗ ಉಳಿದವರು ಹೊರಗಿದ್ದರು. ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಆದರೆ ಈ ನಡುವೆ ಶಾಸಕ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಾಕಿದ್ದಾರೆ, ವಾಹನಗಳ ಸುಟ್ಟಿದ್ದಾರೆ, ನವೀನ್ ಮನೆಗೂ ಹಾನಿ ಮಾಡಿ ಅರೆಸ್ಟ್ ಮಾಡಿ ಅಂತ ಪಟ್ಟು ಹಿಡಿದಿದ್ದರು. ಪೊಲೀಸರ ಪ್ರಕಾರ ದೂರು ನೀಡಿದಾಗ ನವೀನ್ ಅರೆಸ್ಟ್ ಮಾಡಲಾಗಿತ್ತು, ಜನ ಗುಂಪು ಸೇರಿದ್ದರಿಂದ ಅವನನ್ನು ಹೊರತರಲು ಆಗಿರಲಿಲ್ಲವಂತೆ. ಕೂಡಲೇ ಪೊಲೀಸರು ಅರೆಸ್ಟ್ ಮಾಡಿ ಅನೌನ್ಸ್ ಮಾಡಿದ್ದರೆ ಇಷ್ಟು ಗಲಭೆ ನಡೆಯುತ್ತಿರಲಿಲ್ಲ ಎಂದು ನನಗನ್ನಿಸುತ್ತದೆ ಎಂದರು.
ಹಾಗೆ ಘಟನೆ ಸಂಬಂಧ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗಲಿ, ಅದು ಯಾವುದೇ ಪಕ್ಷದವರಿದ್ದರೂ ಶಿಕ್ಷೆ ಆಗಬೇಕು. ಗಲಭೆ ಮಾಡಿದವರ ಹಿಂದೆ ಯಾವುದೇ ಶಕ್ತಿ ಇದ್ದರೂ ತನಿಖೆಯಿಂದ ಹೊರಬರಬೇಕು, ಇಂತಹ ಪ್ರಕರಣಗಳು ನಡೆದಾಗ ಸತ್ಯ ಹೊರಬರಲು ನ್ಯಾಯಾಂಗ ತನಿಖೆ ಆಗಬೇಕು. ಹಾಲಿ ನ್ಯಾಯಾಧೀಶರಿಂದ ಕೂಡ ತನಿಖೆ ಆಗಲಿ. ಪೊಲೀಸರು ವಶಕ್ಕೆ ಪಡೆದವರ ಪೈಕಿ ಅಮಾಯಕರಿದ್ದರೆ ಬಿಡುಗಡೆ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ವೇಳೆ ಸಿದ್ದರಾಮಯ್ಯನವರಿಗೆ ರಿಜ್ವಾನ್ ಅರ್ಷದ್, ನಸೀರ್ ಅಹಮದ್, ವೆಂಕಟರಮಣಪ್ಪ ಮತ್ತಿತರರು ಸಾಥ್ ನೀಡಿದರು.