ಮಂಗಳೂರು: ಸೋಮವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಹಿರಿಯ ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡೀಸ್ ಅವರ ಅಂತ್ಯಕ್ರಿಯೆ ಸೆಪ್ಟೆಂಬರ್ 16 ರಂದು (ಗುರುವಾರ) ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಪ್ರಕಟಣೆ ನೀಡಿದ್ದಾರೆ.
ಈ ಮೊದಲು ಆಸ್ಕರ್ ಫರ್ನಾಂಡಿಸ್ ಅವರ ಅಂತ್ಯಕ್ರಿಯೆ ಬುಧವಾರದಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಮಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡರು ಪ್ರಕಟಿಸಿದ್ದರು. ಇದೀಗ ಸಲೀಂ ಅಹ್ಮದ್ ಅವರು ನೀಡಿರುವ ಪ್ರಕಟಣೆಯಂತೆ ಇಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿ ಮತ್ತು ಚರ್ಚ್ನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮಧ್ಯಾಹ್ನ 3 ಗಂಟೆಗೆ ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮೃತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸೆಪ್ಟೆಂಬರ್ 15 ರಂದು 10 ಗಂಟೆಗೆ ಮಂಗಳೂರಿನ ಮಿಲಾಗ್ರಿಸ್ ಚರ್ಚ್ನಲ್ಲಿ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ಅದೇ ದಿನ ಸಂಜೆ ಬೆಂಗಳೂರಿಗೆ ಏರ್ ಲಿಪ್ಟ್ ಮಾಡಲಾಗುತ್ತದೆ. ಸೆಪ್ಟೆಂಬರ್ 16 ರಂದು 10 ರಿಂದ 12 ಗಂಟೆಯವರೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮೃತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 3.30 ಕ್ಕೆ ಬೆಂಗಳೂರಿನ ಪ್ಯಾಟ್ರಿಕ್ ಚರ್ಚ್ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಂತಾಪ ಪತ್ರ
ಆಸ್ಕರ್ ಫರ್ನಾಂಡೀಸ್ ಅವರ ನಿಧನಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂತಾಪ ಪತ್ರ ಕಳುಹಿಸಿದ್ದಾರೆ. ಆಸ್ಕರ್ ಫರ್ನಾಂಡೀಸ್ ಅವರ ಪತ್ನಿ ಬ್ಲೋಸಮ್ ಫರ್ನಾಂಡೀಸ್ ಅವರಿಗೆ ಸಂತಾಪ ಪತ್ರ ಬರೆದಿರುವ ಅವರು "ಆಸ್ಕರ್ ಫರ್ನಾಂಡಿಸ್ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಅವರು ನೀಡಿರುವ ಸೇವೆಯನ್ನು ದೇಶ ನೆನಪಿಸಿಕೊಳ್ಳುತ್ತದೆ . ನನ್ನ ಪತ್ನಿ ಗುರ್ ಶರಣ್ ಕೌರ್ ಅವರು ಅಂತಿಮ ದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ನಾಳೆ ಡಿಕೆಶಿ ಮಂಗಳೂರು ಮತ್ತು ಉಡುಪಿಗೆ
ಆಸ್ಕರ್ ಫರ್ನಾಂಡೀಸ್ ಅವರ ನಿಧನದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಾಳೆ ಮಂಗಳೂರು ಮತ್ತು ಉಡುಪಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10.50 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು 12.30ಕ್ಕೆ ಉಡುಪಿಗೆ ತೆರಳಲಿದ್ದಾರೆ. ಉಡುಪಿಯಲ್ಲಿ ಶೃದ್ದಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ 3 ಗಂಟೆಗೆ ಮಂಗಳೂರಿನಲ್ಲಿ ನಡೆಯುವ ಮೃತರ ಅಂತಿಮ ದರ್ಶನದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಅವರು ಬೆಂಗಳೂರಿಗೆ ತೆರಳಲಿದ್ದಾರೆ.
ಇದನ್ನೂ ಓದಿ:ನನ್ನನ್ನು ಪಕ್ಷಕ್ಕೆ ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿದ್ದರು.. ಆಸ್ಕರ್ ಫರ್ನಾಂಡಿಸ್ ಗುಣಗಾನ ಮಾಡಿದ ಸಿದ್ದರಾಮಯ್ಯ..