ಬೆಳಗಾವಿ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯ ರಾವ್, ಯಾವುದೇ ಧರ್ಮಕ್ಕೆ ಸೇರಿದರೂ ಆತ ದೇಶದ್ರೋಹಿಯೇ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೋಪಿ ಶರಣಾಗಿದ್ದು, ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ. ತನಿಖೆಯ ಮೊದಲೇ ಆತ ಮಾನಸಿಕವಾಗಿ ನೊಂದಿದ್ದ ಎಂದು ಹೇಳುವುದು ಸರಿಯಲ್ಲ. ಆರೋಪಿ ಸಿಗುವ ಮೊದಲು ಯಾರೋ ಇರಬಹುದು ಅಂತ ಪ್ರಕರಣವನ್ನು ದೊಡ್ಡ ಮಟ್ಟಕ್ಕೆ ಒಯ್ದಿದ್ದರು. ಈಗ ತಮ್ಮವನೇ ಎಂದು ಗೊತ್ತಾದಾಗ ಬೇರೆ ರೀತಿಯ ಟ್ವಿಸ್ಟ್ ಕೊಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಆತ ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದ್ರೂ ದೇಶದ್ರೋಹಿನೇ. ಯಾವುದೇ ಪಕ್ಷದವರು ಇಂಥವರನ್ನು ಸಮರ್ಥಿಸಿಕೊಳ್ಳಬಾರದು. ಪೊಲೀಸ್ ತನಿಖೆ ನಡೆಯುವಾಗ ಈ ರೀತಿ ಹೇಳಿಕೆ ಕೊಡಬಾರದು. ಮಾನಸಿಕವಾಗಿ ಸರಿಯಿಲ್ಲ ಎಂದು ಹೇಳಬೇಕಾದವರು ವೈದ್ಯರು. ಆದರೆ ಬಿಜೆಪಿ ಸಹ ಕಾರ್ಯಕರ್ತ ಈ ಕೃತ್ಯ ಎಸಗಿದ್ದಕ್ಕೆ ಬೇರೆ ಬೇರೆ ರೀತಿಯಲ್ಲಿ ಸಮರ್ಥನೆ ನೀಡುತ್ತಿದ್ದಾರೆ ಎಂದರು. ದೇಶದ ಭದ್ರತೆ ವಿಚಾರ ಬಂದಾಗ ಎಲ್ಲರೂ ಒಂದೇ ಎಂದರು.
ಇನ್ನು, ದೆಹಲಿ ಚುನಾವಣೆಯ ನಂತರ ಕೆಪಿಸಿಸಿ ಅಧ್ಯಕ್ಷರ ನೇಮಕವಾಗಲಿದೆ. ಅಧ್ಯಕ್ಷ ಸ್ಥಾನ ಹಂಚಿಕೆ ಬೇಗ ಮಾಡಿ ಎಂದು ಕೆಲವರು ಒತ್ತಾಯ ಮಾಡುತ್ತಿದ್ದಾರೆ. ಅಲ್ಲದೇ ಇಬ್ಬರಿರುವ ಕಾರ್ಯಾಧ್ಯಕ್ಷರನ್ನು ನಾಲ್ಕಕ್ಕೆ ವಿಸ್ತರಿಸುವಂತೆ ಆಗ್ರಹಿಸಲಾಗಿದೆ. ಯಾವುದೇ ಪೋಸ್ಟ್ ಹಂಚಿಕೆ ಸಂದರ್ಭದಲ್ಲಿ ಈ ರೀತಿ ಗೊಂದಲ ಸಹಜ. ಸಿದ್ದರಾಮಯ್ಯರನ್ನು ಸಿಎಲ್‌ಪಿ ನಾಯಕನಾಗಿ ಆಯ್ಕೆ ಮಾಡುವಾಗಲೂ ಇಂತಹ ಗೊಂದಲ ನಿರ್ಮಾಣವಾಗಿತ್ತು ಎಂದು ಸತೀಶ್ ಜಾರಕಿಹೊಳಿ ಹೇಳಿದ್ರು.
ಅಧ್ಯಕ್ಷ ಸ್ಥಾನ ಕೊಡಿ ಎಂದು ನಾನು ಕೇಳಿಲ್ಲ. ಆದರೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಹೇಳಿದ್ದೇನೆ. ಇನ್ನು ದಲಿತ ನಾಯಕರಿಗೆ ಅಧ್ಯಕ್ಷ ಸ್ಥಾನ ಕೊಡಿ ಅಂತ ಕೇಳುವುದು ತಪ್ಪಲ್ಲ ಎಂದರು.
ಆಡಳಿತ ದೃಷ್ಟಿಯಿಂದ ಆದಷ್ಟು ಬೇಗ ಸಂಪುಟ ವಿಸ್ತರಣೆ ಆದರೆ ಉತ್ತಮ. ಉಪ ಚುನಾವಣೆಯಲ್ಲಿ ಗೆದ್ದವರು ಈಗಾಗಲೇ ಅತಂತ್ರರಾಗಿದ್ದಾರೆ. ಎಲ್ಲರನ್ನೂ ಸಚಿವರನ್ನಾಗಿ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಸಂಪುಟ ರಚನೆಯಲ್ಲಿ ಸಾಕಷ್ಟು ಗೊಂದಲಗಳಿವೆ. ಸಂಪುಟದಲ್ಲಿ ಎಲ್ಲರಿಗೂ ಅವಕಾಶ ಸಿಗುವುದು ಅನುಮಾನ. ಎಲ್ಲರನ್ನು ತೃಪ್ತರನ್ನಾಗಿ ಮಾಡಲು ಸಾಧ್ಯವಿಲ್ಲ. ಸಂಪುಟ ವಿಸ್ತರಣೆ ಆದರೆ ಸರ್ಕಾರದ ಮೇಲೆ ಪರಿಣಾಮ ಬೀರಲಿದೆ ಎಂದು ಮಾಜಿ ಸಚಿವ ಭವಿಷ್ಯ ನುಡಿದರು.