ಬೆಂಗಳೂರು : ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಭ್ಯರ್ಥಿಗಳ ಪ್ರಚಾರ ಕಾರ್ಯವೂ ಭರದಿಂದ ಸಾಗುತ್ತಿದ್ದು, ಇಂದು ಬಚ್ಚೇಗೌಡರ ಪರ ಕೇಂದ್ರದ ಮಾಜಿ ಸಚಿವ ಎಸ್.ಎಂ ಕೃಷ್ಣ ಭರ್ಜರಿ ಪ್ರಚಾರ ಮಾಡಿದರು.
ಹೊಸಕೋಟೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಮತಯಾಚನೆ ಮಾಡಿದರು. ಈ ವೇಳೆ ಮೂರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯ ಕಾರ್ಯಕರ್ತರು ಸೇರಿ ಶಕ್ತಿ ಪ್ರದರ್ಶನವನ್ನು ತೋರಿಸಿದರು. ಬಚ್ಚೇಗೌಡರ ಪರ ನಡೆದ ರೋಡ್ ಶೋದಲ್ಲಿ ಮಾತನಾಡಿದ ಎಸ್.ಎಂ ಕೃಷ್ಣ, ಕ್ಷೇತ್ರದ ವಿಧಾನಸಭಾ ಸದಸ್ಯರಾಗಿ, ಸಚಿವರಾಗಿ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಮತದಾರರು ಬಚ್ಚೇಗೌಡರನ್ನು ಕೆಂಪುಕೋಟೆಗೆ ಕಳುಹಿಸಬೇಕು ಎಂದರು. ಮತ್ತೊಮ್ಮೆ ಬಿಜೆಪಿ ಬಹುಮತ ಪಡೆದು ನರೇಂದ್ರ ಮೋದಿ ಪ್ರಧಾನಿಯಾಗುವುದು ನಿಶ್ಚಿತವಾಗಿದ್ದು, ವಿರೋಧ ಪಕ್ಷಗಳು ಹತಾಶರಾಗಿ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಅನಾವಶ್ಯಕ ಗೊಂದಲ ನಿರ್ಮಿಸುತ್ತಿದ್ದಾರೆ ಎಂದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಕಳೆದ 10 ವರ್ಷಗಳಿಂದ ಪ್ರತಿನಿಧಿಸುತ್ತಿರುವ ವೀರಪ್ಪ ಮೊಯ್ಲಿ ಕೇವಲ ಭರವಸೆಗಳನ್ನು ನೀಡುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಯಾವುದೇ ಶಾಶ್ವತ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಅವರು ವಿಫಲವಾಗಿದ್ದಾರೆ. ಮನಮೋಹನ್ ಸಿಂಗ್ ಉತ್ತಮ ಆಡಳಿತಗಾರರಾದಾಗ್ಯೂ ಸಹ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದೆ ಕುಟುಂಬ ರಾಜಕಾರಣದ ಕೈಗೊಂಬೆಯಾಗಿದ್ದರು. ದೇಶದ ಎಲ್ಲೆಡೆ ಮತೊಮ್ಮೆ ನರೇಂದ್ರ ಮೋದಿಯೇ ಪ್ರಧಾನಿಯಾಗಬೇಕೆಂಬ ಬಯಕೆಯನ್ನು ಮತದಾರರು ಹೊಂದಿದ್ದಾರೆ ಎಂದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಬಿ.ಎನ್ ಬಚ್ಚೇಗೌಡ ಮಾತನಾಡಿ, ಎತ್ತಿನ ಹೊಳೆ, ಮೇಕೆದಾಟು, ಕೃಷ್ಣಾ ಮೇಲ್ದಂಡೆ, ಕಾವೇರಿ ಯೋಜನೆಗಳ ಮೂಲಕ ನೀರು ಹರಿಸುವುದಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು. ಸುಳ್ಳು ಭರವಸೆಗಳ ಸರದಾರ ಎಂಬ ಖ್ಯಾತಿ ಹೊಂದಿರುವ ವೀರಪ್ಪ ಮೊಯ್ಲಿ ಅಸಹಾಯಕರಾಗಿ ತಮ್ಮ ಸಾಧನೆಗಳನ್ನು ತಿಳಿಸುವ ಬದಲಿಗೆ ಕೇಂದ್ರವನ್ನು ದೂಷಿಸುತ್ತಿದ್ದಾರೆ ಎಂದರು.