ಬೆಂಗಳೂರು: ರೈತರ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗವ ಅವಕಾಶ ಹಾಗೂ ಡಾಕ್ಟರ್, ಎಂಜಿನಿಯರ್ ಮಕ್ಕಳು ಇಚ್ಛಿಸಿದರೆ ರೈತರಾಗುವ ಅವಕಾಶ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯಿಂದ ಸಿಗಲಿದೆ. ಇದು ರೈತಪರ ಕಾಯ್ದೆ. ಬಂದ್ ಕರೆ ನೀಡಿದ್ದು ಸರಿಯಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.
ಸಿಎಂ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾಕ್ಟರ್ ಮಗ ಮಾತ್ರ ಡಾಕ್ಟರ್ ಆಗಬೇಕಾ?, ಎಂಜಿನಿಯರ್ ಮಗ ಮಾತ್ರ ಎಂಜಿನಿಯರ್ ಆಗಬೇಕಾ?, ರೈತರ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಬಾರದಾ?. ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಲಾಭವಾಗುತ್ತದೆಯೇ ಹೊರತು ನಷ್ಟವಾಗುವುದಿಲ್ಲ ಎಂದು ಕಾಯ್ದೆಯನ್ನು ಸಮರ್ಥಿಸಿಕೊಂಡರು.
ರೈತರಿಗೆ ಲಾಭವಾಗುವುದಾದರೆ ನೀವೇಕೆ ವಿರೋಧ ಮಾಡುತ್ತಿದ್ದೀರಿ. ನಿಮಗೆ ಹೋರಾಟ ಮಾಡುವ ಹಕ್ಕಿದೆ. ಹಾಗೆಯೇ ತಾವು ಬೆಳೆದ ಬೆಳೆಗಳನ್ನು ಯಾರಿಗಾದರು ಮಾರಾಟ ಮಾಡುವ ಹಕ್ಕು ಇದೆ. ರೈತರ ಪರವಾಗಿರುವ ಕಾಯ್ದೆ ಇದು. ಇದಕ್ಕಾಗಿ ಬಂದ್ ಮಾಡುವುದು ಸರಿಯಲ್ಲ ಎಂದರು.
ಬಿಜೆಪಿ ಸರ್ಕಾರಕ್ಕೆ ಕಪ್ಪು ಮಸಿ ಬಳಿಯುವ ಹುನ್ನಾರ ನಡೆಸಲಾಗಿದೆ. ಎಡ ಪಂಥೀಯರಿಗೆ ಕೆಲಸವೇ ಇಲ್ಲ. ಉದ್ದಿಮೆ ಮತ್ತು ಕಾರ್ಮಿಕ ಇಬ್ಬರನ್ನು ಹೇಗೆ ಮೇಲೆತ್ತಬೇಕು ಎನ್ನುವುದರ ಬಗ್ಗೆ ಯೋಚನೆ ಮಾಡಬೇಕು. ಇಡೀ ರಾಜ್ಯದಲ್ಲಿ ಬಂದ್ ವಿಫಲವಾಗಿದೆ. ಜನಜೀವನ ಯಥಾಸ್ಥಿತಿಯಲ್ಲಿದೆ ಎಂದರು.