ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕಾರನ್ನು ಅಡ್ಡಗಟ್ಟಿ ಸಿಗರೇಟ್ ವಿತರಕನಿಂದ 45 ಲಕ್ಷ ರೂ.ಗಳನ್ನು ಸುಲಿಗೆ ಮಾಡಿದ್ದ ಆರೋಪಿಗಳನ್ನು ಬಂಧನ ಮಾಡುವಲ್ಲಿ ಪುಲಕೇಶಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೊಹಮ್ಮದ್ ಇಶಾಖ್, ಮೊಹಮ್ಮದ್ ಪರ್ವೇಜ್,ಮೊಹಮ್ಮದ್ ಅದ್ನಾನ್, ಅಫ್ನಾನ್ ಪಾಷ ಬಂಧಿತ ಆರೋಪಿಗಳು. ಕಳೆದ ತಿಂಗಳ ಜೂನ್ 11ರಂದು ಐಟಿಸಿ ಕಂಪನಿಯ ವಿತರಕ ರಾಕೇಶ್ ಪೋಕರ್ಣ ಎಂಬುವರು ಎಂದಿನಂತೆ ಕಾರಿನಲ್ಲಿ ಕಲೆಕ್ಷನ್ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ವಿಚಾರವನ್ನು ತಿಳಿದಿದ್ದ ಇದೇ ಕಂಪನಿಯಲ್ಲಿ ಏಳೆಂಟು ವರ್ಷದಿಂದ ಕೆಲಸ ಮಾಡುತ್ತಿದ್ದ ಪ್ರಮುಖ ಆರೋಪಿ ಮೊಹಮ್ಮದ್, ಗ್ಯಾಂಗ್ ರೆಡಿ ಮಾಡಿಕೊಂಡು ಪುಲಕೇಶಿನಗರದ ರಿಚರ್ಡ್ಸ್ ಟೌನ್ ಬಳಿ ಕಾರನ್ನು ಅಡ್ಡಹಾಕಿ ಚಾಕು ತೋರಿಸಿ ಕಾರಿನಲ್ಲಿದ್ದ ₹45 ಲಕ್ಷ ಹಣ ದರೋಡೆ ಮಾಡಿದ್ದರು.
ಸಿಗರೇಟ್ ವಿತರಕನನ್ನು ಸುಲಿಗೆ ಮಾಡಿದ್ದ ಗ್ಯಾಂಗ್ ಕೊನೆಗೂ ಅಂದರ್ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡ ಡಿಸಿಪಿ ಡಾ. ಶರಣಪ್ಪ ಆರೋಪಿಗಳನ್ನು ಪತ್ತೆ ಮಾಡುವ ಸಲುವಾಗಿ ಪುಲಕೇಶಿನಗರದ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ತಬಾರಕ್ ಫಾತೀಮಾ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಆರೋಪಿಗಳು ತಾವು ದರೋಡೆ ಮಾಡಿದ್ದ ಹಣವನ್ನು ಹಂಚಿಕೆ ಮಾಡಿಕೊಂಡಿದ್ದರಂತೆ. ಇದರಲ್ಲಿ ಪ್ರಮುಖ ಆರೋಪಿ ಮೊಹಮ್ಮದ್ ಇಶಾಖ್ ತನ್ನ ಪಾಲಿನ ಹಣವನ್ನು ಬೇತಮಂಗಲದ ಸಹೋದರಿ ಮನೆಯಲ್ಲಿ ಕಾರಿನ ಟೈರ್ ಒಳಗೆ ಬಚ್ಚಿಟ್ಟಿದ್ದ. ಈ ಕುರಿತು ಮಾಹಿತಿ ಪತ್ತೆ ಮಾಡಿ ಸದ್ಯ ಆರೋಪಿಗಳಿಂದ ಮೂವತ್ತ ಮೂರು ಲಕ್ಷದ ಎಂಬತ್ತಾರು ಸಾವಿರದ ಐನೂರು ರೂ. ಹಣ ಜಪ್ತಿ ಮಾಡಿದ್ದಾರೆ. ಹಾಗೆ ಬಂಧಿತರಿಂದ ಐಫೋನ್, ಇತರೆ ಮೊಬೈಲ್, ವಾಹನಗಳನ್ನು ಜಪ್ತಿ ಮಾಡಿ ತನಿಖೆ ಮುಂದುವರೆಸಲಾಗಿದೆ.