ಮಂಗಳೂರು: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಹಿಂದೂ ವ್ಯಕ್ತಿಯ ಮೃತದೇಹಕ್ಕೆ ಎಸ್ಕೆಎಸ್ಎಸ್ಎಫ್ ಮುಸ್ಲಿಂ ಸಂಘಟನೆ ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಿದ ಘಟನೆ ಮೂಡುಬಿದಿರೆ ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ವ್ಯಕ್ತಿಯೋರ್ವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇದರಿಂದಾಗಿ ಮನನೊಂದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಳಿಕ ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರ ನಡೆಸಲು ಕುಟುಂಬಸ್ಥರು ಮುಂದೆ ಬಾರದಿದ್ದಾಗ, ಮೃತರ ಪುತ್ರನ ಕೋರಿಕೆಯಂತೆ ಎಸ್ಕೆಎಸ್ಎಸ್ಎಫ್ ಮೂಡುಬಿದಿರೆ ವಲಯದ ಕಾರ್ಯಕರ್ತರು ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.
ಈ ವೇಳೆ ಎಸ್ಕೆಎಸ್ಎಸ್ಎಫ್ ಸಂಘಟನೆಯ ಮೂಡುಬಿದಿರೆ ವಲಯದ ಅಧ್ಯಕ್ಷ ಅಶ್ರಫ್ ಮರೋಡಿ, ವಲಯ ಪ್ರಧಾನ ಕಾರ್ಯದರ್ಶಿ ಫಾರೂಕ್ ವಿಶಾಲ್ ನಗರ, ವಲಯ ವಿಖಾಯ ಅಧ್ಯಕ್ಷ ಹೈದರ್ ಕೋಟೆಬಾಗಿಲು, ಪ್ರಮುಖರಾದ ಕರೀಮ್ ವಿಶಾಲ್ ನಗರ, ಅಕ್ಬರ್ ತೋಡಾರ್, ರಾಝಿಕ್ ಮಾರ್ಪಾಡಿ, ಕಲಂದರ್ ಈದ್ಗಾ ಹಾಗೂ ಇಬ್ರಾಹೀಂ ಅಂಗರಕರಿಯ ಉಪಸ್ಥಿತರಿದ್ದರು.