ವಿಜಯಪುರ: ಲೋಕಸಭೆ ಚುನಾವಣೆ ಹಿನ್ನೆಲೆ ದೇಶಾದ್ಯಂತ ರಾಜಕೀಯ ಚಟುವಟಿಕೆ ಗರಿಗೆದರಿವೆ. ಅಷ್ಟೆ ಹೈಸ್ಪೀಡ್ನಲ್ಲಿ ಆರೋಪ ಪ್ರತ್ಯಾರೋಪದ ಕೂಗು ಕೂಡ ಕೇಳಿ ಬರುತ್ತಿದೆ.
ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ನಾಯಕರ ಆರೋಪದ ಮಾತುಗಳು ಮುಗಿಲು ಮುಟ್ಟಿವೆ. ಮೊನ್ನೆಯಷ್ಟೆ ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಮೂವರು ಕಾಂಗ್ರೆಸ್ ನಾಯಕರ ಹೆಸರನ್ನು ಪ್ರಸ್ತಾಪಿಸದೆ ಎತ್ತುಗಳಿಗೆ ಹೋಲಿಕೆ ಮಾಡಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದರು. ಇವತ್ತು ಮತ್ತೆ ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ವಿರುದ್ಧ ಹರಿಹಾಯ್ದಿದ್ದಾರೆ.
ಮದ್ದೇಬಿಹಾಳ ತಾಲೂಕಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ, ಎಂ.ಬಿ.ಪಾಟೀಲ್ ವೀರಶೈವ ಲಿಂಗಾಯತ ಧರ್ಮವನ್ನು ಒಡೆಯುವಂತಹ ಕೆಲಸ ಮಾಡುತ್ತಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಅಲ್ಲಲ್ಲಿ ಸಭೆ ನಡೆಸಿ ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯುತ್ತಿದ್ದಾರೆ. ವೀರಶೈವ ಲಿಂಗಾಯತ ಧರ್ಮ ಒಂದು ಕುಟುಂಬ ಇದ್ದಂತೆ. ಅಂತಹ ಪವಿತ್ರ ಧರ್ಮವನ್ನು ಒಡೆಯುವಂತಹ ನೀಚ ಕೆಲಸ ಎಂ.ಬಿ.ಪಾಟೀಲ್ ಮಾಡುತ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ವೀರಶೈವ ಲಿಂಗಾಯತ ಧರ್ಮವನ್ನು ಒಡೆಯಲು ಪ್ರಯತ್ನಿಸಿದ ಅನೇಕ ಕಾಂಗ್ರೆಸ್ ನಾಯಕರಿಗೆ ಪೆಟ್ಟು ಬಿದ್ದಿದೆ. ಡಿ.ಕೆ.ಶಿವಕುಮಾರ್ ಕೂಡ ಮೊನ್ನೆಯಷ್ಟೆ ಬಳ್ಳಾರಿಯಲ್ಲಿ ಕ್ಷಮೆಯಾಚಿಸಿದ್ದಾರೆ. ನಾವು ಬೇರೆಯವರ ಮಾತು ಕೇಳಿ ಪ್ರತ್ಯೇಕ ಲಿಂಗಾಯತ ಧರ್ಮ ಮಾಡಲು ಹೊರಟಿದ್ದೆವು. ನಮ್ಮಿಂದ ತಪ್ಪಾಗಿದೆ. ಜನರು ಕ್ಷಮಿಸಬೇಕು ಅಂತ ಮಾಧ್ಯಮದವರ ಮುಂದೆ ಹೇಳಿಕೊಂಡಿದ್ದಾರೆ ಎಂದರು.
ನಾನು ಲಿಂಗಾಯತ, ಬೇಕಾದರೆ ನನ್ನ ಲಿವಿಂಗ್ ಸರ್ಟಿಫಿಕೇಟ್ ತೆಗೆದು ನೋಡಲಿ ಅಂತ ಹೇಳುತ್ತಿರುವ ಎಂ.ಬಿ.ಪಾಟೀಲ್ ಅವರಿಗೆ ಅವರ ಜಾತಿಯ ಮೇಲೆ ಡೌಟ್ ಬಂದಿರಬೇಕು ಅಂತ ಕಿಡಿಕಾರಿದರು.