ಕಲಬುರಗಿ: ಈಶಾನ್ಯ ವಲಯ ಶಿಕ್ಷಕರ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ.ಬಿ.ಅಂಬಲಗಿ ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈಶಾನ್ಯ ಕರ್ನಾಟಕ ಶಿಕ್ಷಕರ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡದ ಕಾರಣ ಅಸಮಾಧಾನಗೊಂಡು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಉಪನ್ಯಾಸಕರಾಗಿ ಹತ್ತು ವರ್ಷದ ಸೇವಾವಧಿ ಇರುವಾಗಲೇ ರಾಜೀನಾಮೆ ನೀಡಿ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿದ್ದೆ. 2014 ರಲ್ಲಿ ಟಿಕೆಟ್ ಕೊಟ್ಟು ಬೆಂಬಲಿಸಿದಕ್ಕೆ ಪಕ್ಷದ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸಿದರು. ಹಲವು ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ನಿಸ್ವಾರ್ಥದಿಂದ ಅಳಿಲು ಸೇವೆ ಮಾಡಿದ್ದೇನೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪಕ್ಷ ಕಟ್ಟಿಬೆಳೆಸಲು ಶ್ರಮ ಪಟ್ಟಿದ್ದೇನೆ. ಆದರು ಸಹ ನನಗೆ ಈ ಬಾರಿ ಟಿಕೆಟ್ ನೀಡದೆ ಅನ್ಯಾಯ ಮಾಡಿದ್ದಾರೆ ಎಂದರು.
ಕಳೆದ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿ ಮಾಡುವಂತೆ ಮನವಿ ಮಾಡಿದ್ದೆ, ಆಗ ಕೂಡ ನನಗೆ ಅವಕಾಶ ನೀಡಿಲ್ಲ. ಈ ಬಾರಿಯಾದರೂ ಟಿಕೆಟ್ ನೀಡುತ್ತಾರೆ ಎಂಬ ನಿರೀಕ್ಷೆಯಿತ್ತು. ಈ ಬಾರಿಯೂ ಟಿಕೆಟ್ ಮತ್ತೊಬ್ಬರಿಗೆ ಘೋಷಿಸಿದ್ದು, ಆದ್ದರಿಂದ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿ ಅಂಬಲಗಿ ತಿಳಿಸಿದ್ದಾರೆ.