ಕಾರವಾರ: ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕಿನಲ್ಲಿ ಕರಿ ಈಶಾಡು ಎನ್ನುವ ವಿಶೇಷ ಮಾವು ಏಪ್ರಿಲ್ ಮೇ ತಿಂಗಳಿನಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟು ಬೆಳೆಗಾರರ ಹೊಟ್ಟೆ ತುಂಬಿಸುತ್ತಿತ್ತು. ಆದರೆ ಕೊರೊನಾ ಎರಡನೇ ಅಲೆಯಿಂದಾಗಿ ಮಾವು ಬೆಳೆಗಾರರು ಹಾಗೂ ಮಾರಾಟಗಾರರಿಗೆ ನಿರಾಸೆ ಮೂಡಿಸಿದೆ.
ಉ.ಕ ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿ ಏಪ್ರಿಲ್ ಮೇ ತಿಂಗಳು ಬಂತು ಅಂದ್ರೆ ಮಾವಿನ ಹಣ್ಣಿನ ವ್ಯಾಪಾರವೇ ಎಲ್ಲರ ಗಮನ ಸೆಳೆಯುತ್ತದೆ. ಅದರಲ್ಲೂ ಕಾರವಾರ ಹಾಗೂ ಅಂಕೋಲಾ ತಾಲೂಕಿನಲ್ಲಿ ಮಾತ್ರ ವಿಶೇಷವಾಗಿ ಬೆಳೆಯುವ ಕರಿ ಈಶಾಡು ಹಾಗೂ ಈಶಾಡು ಎನ್ನುವ ಮಾವಿನ ಹಣ್ಣು ಸಾಕಷ್ಟು ಫೇಮಸ್.
ಪ್ರತಿ ವರ್ಷ ಹಲವು ಬೆಳೆಗಾರರು ಮಾವಿನ ಹಣ್ಣನ್ನ ಮಾರಾಟ ಮಾಡಿಯೇ ಜೀವನ ಸಾಗಿಸುತ್ತಾ ಬಂದಿದ್ದು, ಅದರಲ್ಲೂ ಹಾಲಕ್ಕಿ ಸಮುದಾಯದ ಮಹಿಳೆಯರು ಈ ಮಾವಿನ ಹಣ್ಣು ಬೆಳೆಯುವ ಮಾರಾಟ ಮಾಡುವ ಕಾಯಕವನ್ನೇ ಅವಲಂಬಿಸಿದ್ದಾರೆ. ಆದರೆ ಈ ಬಾರಿ ಕೊರೊನಾ ಎರಡನೇ ಅಲೆಯ ಅಬ್ಬರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಾವು ಮಾರಾಟ ಮಾಡಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಬೆಳೆಗಾರರು ಹಾಗೂ ಮಾರಾಟಗಾರರು ಕಂಗಾಲಾಗಿದ್ದಾರೆ.
ಕೋವಿಡ್ ಕರ್ಫ್ಯೂಗು ಮುನ್ನ ಉತ್ತಮ ದರದಲ್ಲಿ ಮಾವಿನ ಹಣ್ಣು ಮಾರಾಟವಾಗುತ್ತಿತ್ತು. ಕರ್ಫ್ಯೂ ಪ್ರಾರಂಭವಾದ ನಂತರ ಮಾರಾಟ ಸರಿಯಾಗಿ ಆಗುತ್ತಿಲ್ಲ. ಅಲ್ಲದೆ ಹೆದ್ದಾರಿಯ ಪಕ್ಕದಲ್ಲಿ ಹಾಲಕ್ಕಿ ಮಹಿಳೆಯರು ಹಣ್ಣನ್ನ ಸಾಲಾಗಿ ಇಟ್ಟುಕೊಂಡು ಮಾರಾಟ ಮಾಡುತ್ತಾರೆ. ಗೋವಾ ರಾಷ್ಟ್ರೀಯ ಹೆದ್ದಾರಿ ಆಗಿರೋದ್ರಿಂದ ಸಾಕಷ್ಟು ವಾಹನ ಸವಾರರು ರಸ್ತೆಯಲ್ಲಿ ಸಾಗುವಾಗ ಹಣ್ಣನ್ನ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಈ ಬಾರಿ ವಾಹನ ಓಡಾಟ ಸಹ ವಿರಳವಾಗಿರುವುದರಿಂದ ಮಾರಾಟ ಇಲ್ಲದಂತಾಗಿದೆ.
ಇನ್ನು ಹುಬ್ಬಳ್ಳಿ, ಧಾರವಾಡ, ಗೋವಾ ಸೇರಿದಂತೆ ಹಲವು ಪ್ರದೇಶಕ್ಕೆ ಮಾವು ಸಾಗಾಟ ಮಾಡಲಾಗುತ್ತಿತ್ತು. ಕರ್ಫ್ಯೂ ಹಿನ್ನೆಲೆಯಲ್ಲಿ ವಾಹನಗಳಲ್ಲಿ ಬೇರೆ ಪ್ರದೇಶಕ್ಕೆ ತೆಗೆದುಕೊಂಡು ಹೋಗಲು ಆಗದ ಸ್ಥಿತಿ ಇದೆ. ಅಲ್ಲದೆ ಕೊಯ್ಲು ಮಾಡಿದ ಮಾವನ್ನು ಮಾರಾಟ ಮಾಡಲಾಗದೆ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಮಾವು ಮಾರಾಟಗಾರರು.