ಹಾಸನ: ಕೊರೊನಾ ಎಂಬ ಹೆಮ್ಮಾರಿ ಪ್ರತಿದಿನ ಸೋಂಕಿನ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ, ಮಾರ್ಷಲ್ಸ್ ಮತ್ತು ಬೀದಿ ನಾಟಕ ಕಲಾವಿದರು ಸೇರಿ ಸಾರ್ವಜನಿಕರಿಗೆ ಕೈಮುಗಿದು ಜಾಗೃತಿ ಹಾಡನ್ನು ಹಾಡೋ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ನಗರದ ಹೇಮಾವತಿ ಪ್ರತಿಮೆ ಮುಂಭಾಗ ಕೊರೋನಾದಿಂದ ದೂರ ಇರಲು ಅನುಸರಿಸಬೇಕಾದ ನಿಯಮವನ್ನು ಕಲಾವಿದರು ತಮ್ಮ ಹಾಡಿನ ಮೂಲಕ ಜನ್ರ ಮನಮುಟ್ಟಿಸುವ ಕೆಲಸ ಮಾಡಿದರು. ನಂತರ ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೊರೊನಾ ಓಡಿಸುವ ಬಗ್ಗೆ ಹಾಡನ್ನು ಹಾಡಿ ಇಲ್ಲಿನ ಸುತ್ತ ಮುತ್ತಲ ವ್ಯಾಪಾರಸ್ಥರಿಗೆ ಅರಿವು ಮೂಡಿಸಿದರು.
ಜೊತೆಗೆ ಗುಂಪು ಗುಂಪಾಗಿ ಸೇರದೇ ಸಾಮಾಜಿಕ ಅಂತರ ಕಾಪಾಡುವ ಮೂಲಕ ಸಾಂಕ್ರಾಮಿಕ ರೋಗವನ್ನು ದೂರ ಮಾಡಬೇಕು ಎಂದು ನಮ್ಮ ಪೌರಕಾರ್ಮಿಕರು ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದಾರೆ. ತಮ್ಮ ಪ್ರಾಣ ಅಮೂಲ್ಯವಾಗಿದ್ದು, ಒಂದು ಸಲ ಹೊರಟ ಪ್ರಾಣ ಮತ್ತೆ ಬರುವುದಿಲ್ಲ ಎಂಬ ಸತ್ಯ ನುಡಿಯನ್ನು ಜಿಲ್ಲಾಡಳಿತ ಮತ್ತು ನಗರಸಭೆಯಿಂದ ತಿಳಿಸಲಾಗುತ್ತಿದೆ ಎಂದರು.
ಇದೆ ವೇಳೆ, ನಗರಸಭೆ ಆರೋಗ್ಯ ನಿರೀಕ್ಷಕರಾದ ಮಂಜುನಾಥ್, ಆರೋಗ್ಯ ನಿರೀಕ್ಷಕ ಆನಂದ್, ಪ್ರಶಸ್ತಿ ವಿಜೇತ ಮತ್ತು ಕಲಾವಿದ ಬಿ.ಟಿ. ಮಾನವ, ನಗರಸಭೆಯ ಪರಶುರಾಮು. ಮಾರ್ಷಲ್ಸ್ ಘಟಕ ಅಧಿಕಾರಿ ಬಿ.ಜಿ. ಮಂಜುಳಾ, ಹೆಚ್.ಎನ್. ಮಹಾದೇವ್, ನರಸಿಂಹ ಮೂರ್ತಿ, ಪ್ರೇಮ, ಪುಟ್ಟರಾಜು, ಕುಮಾರ್ ಇತರರು ಉಪಸ್ಥಿತರಿದ್ದರು.