ಚಾಮರಾಜನಗರ: ಶಂಕಿತ ಭಯೋತ್ಪಾದಕರ ಸ್ನೇಹ ಮತ್ತು ಆಶ್ರಯ ನೀಡಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದ ಶಂಕೆ ಮೇಲೆ ಗುಂಡ್ಲುಪೇಟೆಯ ಇಬ್ಬರು ಮೌಲ್ವಿಗಳನ್ನು ವಿಚಾರಣೆಗೊಳಪಡಿಸಿದ ಬಳಿಕ ಮುಸ್ಲಿಂ ಧಾರ್ಮಿಕ ಮುಖಂಡರಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಸಂಜೆ ಗುಂಡ್ಲುಪೇಟೆ ಪಿಎಸ್ಐ ಮುಸ್ಲಿಂ ಧಾರ್ಮಿಕ ಮುಖಂಡರ ಸಭೆ ಕರೆದು ಅಪರಿಚಿತರು, ಅನುಮಾನಸ್ಪದ ವ್ಯಕ್ತಿಗಳು ಆಶ್ರಯ ಕೇಳಿದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಜೊತೆಗೆ, ಮಸೀದಿ ಮತ್ತು ಮದರಸಗಳಲ್ಲಿ ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ತಾಕೀತು ಮಾಡಿದ್ದಾರೆ.ಒಂದು ವೇಳೆ ಧಾರ್ಮಿಕ ಕೇಂದ್ರಗಳಲ್ಲಿ ಕಾನೂನುಬಾಹಿರ ಚಟುವಟಿಕೆ, ಭಯೋತ್ಪಾದಕ ಚಟುವಟಿಕೆಗಳು ಕಂಡು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಶನಿವಾರ ತಡರಾತ್ರಿ ಭಯೋತ್ಪಾದನಾ ನಿಗ್ರಹ ದಳ ಮತ್ತು ಆಂತರಿಕ ಭದ್ರತಾ ಪಡೆಯು ಗುಂಡ್ಲುಪೇಟೆ ಇಬ್ಬರು ಮೌಲ್ವಿಗಳನ್ನು ವಿಚಾರಣೆಗೆ ಒಳಪಡಿಸಿ, ಓರ್ವನನ್ನು ಇನ್ನು ತಮ್ಮ ವಶದಲ್ಲೇ ಇರಿಸಿಕೊಂಡಿದ್ದಾರೆ.