ರಾಯಚೂರು: ನಾರಾಯಣಪುರ ಜಲಾಶಯದಿಂದ ಇಂದು ಬೆಳಿಗ್ಗೆ 6 ಗಂಟೆಗೆ 1.61 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ. ಇದರಿಂದಾಗಿ ಲಿಂಗಸೂಗೂರು, ದೇವದುರ್ಗ ಹಾಗು ರಾಯಚೂರು ತಾಲೂಕಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ನಾರಾಯಣಪುರ ಜಲಾಶಯದಲ್ಲಿ ಸದ್ಯಕ್ಕೆ 1.50 ಲಕ್ಷ ಕ್ಯೂಸೆಕ್ ಒಳಹರಿವಿನ ಪ್ರಮಾಣವಿದ್ದು, ಜಲಾಶಯದ 22 ಗೇಟ್‌ಗಳಿಂದ 1,61,200 ಕ್ಯೂಸೆಕ್ ನೀರನ್ನು ಹರಿ ಬಿಡಲಾಗುತ್ತಿದೆ.
ಯಾದಗಿರಿ ಜಿಲ್ಲೆಯ ಸೊನ್ನತ್ತಿ ಬ್ರಿಡ್ಜ್ ಸಹ ಭರ್ತಿಯಾಗಿದೆ. ಬ್ರಿಡ್ಜ್‌ನಲ್ಲಿ 2.80 ಲಕ್ಷ ಕ್ಯೂಸೆಕ್ ನೀರಿನ ಒಳ ಹರಿವಿದ್ದು, ಬ್ರಿಡ್ಜ್‌ನ ಎಲ್ಲಾ ಗೇಟ್‌ಗಳನ್ನು ತೆರೆಯುವ ಮೂಲಕ 2.80 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.
ಸೊನ್ನತ್ತಿ ಬ್ರಿಡ್ಜ್‌ನಿಂದ ಬಿಡುತ್ತಿರುವ ನೀರು ರಾಯಚೂರು ತಾಲೂಕಿನ ಕೃಷ್ಣಾ ನದಿಗೆ ಸೇರಲಿದೆ. ನಾರಾಯಣಪುರ ಜಲಾಶಯದಿಂದ ಬಿಡಲಾಗಿರುವ 1.61 ಕ್ಯೂಸೆಕ್ ನೀರು ಹಾಗೂ ಸೊನ್ನತ್ತಿ ಬ್ರಿಡ್ಜ್‌ನಿಂದ ಬಿಡಲಾಗಿರುವ 2.80 ಲಕ್ಷ ಕ್ಯೂಸೆಕ್ ನೀರು ಸೇರಿ ಒಟ್ಟು ರಾಯಚೂರು ತಾಲೂಕಿನಲ್ಲಿ 4 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿಯಲಿದ್ದು, ಪ್ರವಾಹ ಭೀತಿ ಎದುರಾಗಿದೆ.
ಈಗಾಗಲೇ ನದಿ ತೀರದ ಪ್ರದೇಶದ ಜನರಿಗೆ ಹೊರಗಡೆ ಹೋಗದಂತೆ ಮತ್ತು ಯಾವುದೇ ಚಟುವಟಿಕೆ ಮಾಡದಂತೆ ಮೈಕ್, ಡಂಗೂರದ ಮೂಲಕ ಜಾಗೃತಿ ಮೂಡಿಸಲು ಸೂಚಿಸಲಾಗಿದೆ.