ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣ ಸಂಖ್ಯೆ ಕಡಿಮೆ ತೋರಿಸಲು ಪರೀಕ್ಷೆ ಪ್ರಮಾಣ ಕಡಿಮೆ ಮಾಡಿರುವುದು ಸರಿಯಲ್ಲ. ಇದು ಸರ್ಕಾರವೇ ಜನರನ್ನು ಹತ್ಯೆ ಮಾಡುವ ನಿರ್ಧಾರ. ಜನರ ಸಾವಿಗೆ ಸರ್ಕಾರವೇ ನೇರ ಕಾರಣವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಐಸಿಎಂಆರ್ ವರದಿ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸಬೇಕು ಎಂದು ಹೇಳಿದೆ. ಸರ್ಕಾರ ಶೇ. 50 ರಷ್ಟು ಪರೀಕ್ಷೆ ಕಡಿಮೆ ಮಾಡಲು ಎಲ್ಲ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. ಪರೀಕ್ಷೆ ಮಾಡಿದಷ್ಟು ಜನ ಜಾಗೃತರಾಗಿರುತ್ತಾರೆ. ಆದರೆ, ಸೋಂಕಿನ ಪ್ರಕರಣ ಹೆಚ್ಚಾಗುತ್ತದೆ ಎಂದು ಪರೀಕ್ಷೆ ಪ್ರಮಾಣ ಕಡಿಮೆ ಮಾಡುವುದು ಸರಿಯಲ್ಲ. ಜನರನ್ನು ಸರ್ಕಾರವೇ ಹತ್ಯೆ ಮಾಡಿದಂತೆ ಆಗುತ್ತದೆ. ಹೀಗಾಗಿ ಸರ್ಕಾರ ಹೆಚ್ಚಿನ ಪರೀಕ್ಷೆ ನಡೆಸಬೇಕು. ಇದರಿಂದ ಸೋಂಕಿತರು ಆರಂಭದಲ್ಲೇ ಗುಣಪಡಿಸಿಕೊಳ್ಳಲು ನೆರವಾಗುತ್ತದೆ. ಡಿಸಿಎಂ ಅಶ್ವತ್ಥ ನಾರಾಯಣ್ ಅವರು ಜವಾಬ್ದಾರಿ ವಹಿಸಿಕೊಂಡ ನಂತರ ಈ ರೀತಿ ಆದೇಶ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರ ಜೀವ ಉಳಿಸಲು ಯಾವ ಕ್ರಮ ಬೇಕಾದರೂ ತೆಗೆದುಕೊಳ್ಳಲಿ. ನಾವು ಸಹಕಾರ ನೀಡುತ್ತೇವೆ. ಆದರೆ, ಮಾಡಿದ ತಪ್ಪನ್ನು ಒಪ್ಪಿಕೊಳ್ಳದೇ ನಾವು ಮಾಡಿದ್ದೇ ಸರಿ ಎನ್ನುವುದಾದರೆ ನಾವು ಅದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ಸರ್ಕಾರದ ಕಾರ್ಯವೈಖರಿ ಬಗ್ಗೆ ನ್ಯಾಯಾಧೀಶರು ಏನೆಲ್ಲಾ ಹೇಳುತ್ತಿದ್ದಾರೆ, ಮಾಧ್ಯಮಗಳು ಏನು ವರದಿ ಮಾಡುತ್ತಿವೆ, ಜನ ಸಾಮಾನ್ಯರು ಏನು ಮಾತನಾಡುತ್ತಿದ್ದಾರೆ ಎಂಬುದನ್ನು ಸರ್ಕಾರ ಗಮನಿಸಬೇಕು. ಮಂತ್ರಿಗಳು ಈಗ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಕೆಲಸ ಮಾಡಿ ಎಂದು ನಾನು ಕಳೆದ ತಿಂಗಳ 18 ರಂದೇ ಹೇಳಿದ್ದೆ. ವಿರೋಧ ಪಕ್ಷದವರು ಹೇಳಿದ್ದನ್ನು ಮಾಡಲು ಈ ಸರ್ಕಾರ ಬೇಕಾ? ಇವರ ಕೈಯಲ್ಲಿ ಇದನ್ನು ನಿಭಾಯಿಸಲು ಸಾಧ್ಯವಿಲ್ಲ. ಇವರು ಮನೆಗೆ ಹೋಗಿ, ರಾಜ್ಯಪಾಲರ ಆಡಳಿತ ಬರುವುದೇ ಉತ್ತಮ ಎಂದ್ರು.
ಶಿಕ್ಷಕರ ಸಾವಿಗೆ ಸರ್ಕಾರವೇ ಹೊಣೆ:
ಚುನಾವಣಾ ಆಯೋಗ, ಸರ್ಕಾರ, ಎಲ್ಲ ರಾಜಕೀಯ ಪಕ್ಷಗಳು ಜಾಗ್ರತೆ ವಹಿಸಬೇಕಿತ್ತು. ಚುನಾವಣೆ ಮುಂದೂಡಬೇಕು ಎಂಬ ಸಲಹೆ ಇತ್ತಾದರೂ ಚುನಾವಣೆ ನಡೆಸುವುದು ಆಯೋಗದ ತೀರ್ಮಾನವಾಗಿತ್ತು. ನನ್ನನ್ನೂ ಸೇರಿ ನಾವು ರಾಜಕೀಯ ಪಕ್ಷದವರು ಸಾಮಾಜಿಕ ಅಂತರ ಕಾಪಾಡಲು ಸಾಧ್ಯವಾಗಲಿಲ್ಲ. ಇಂದು ಬಸವಕಲ್ಯಾಣದಲ್ಲಿ 42 ಜನ ಶಿಕ್ಷಕರು ಕೊರೊನಾದಿಂದ ಮೃತಪಟ್ಟಿರುವುದು ನಮ್ಮೆಲ್ಲರ ಅಪರಾಧ. ನಾವು ಜನ ಸಂಘಟನೆ, ಮತ ಪಡೆಯಬೇಕು ಎಂಬ ಅಮಲಿನಲ್ಲಿದ್ದೆವು. ಆದರೆ, ಸರ್ಕಾರ ಚುನಾವಣೆ ಕೆಲಸ ಮಾಡಿದ ನಮ್ಮ ಶಿಕ್ಷಕ ವೃಂದಕ್ಕೆ ರಕ್ಷಣೆ ನೀಡಬಹುದಾಗಿತ್ತು ಎಂದು ತಿಳಿಸಿದರು.
ಇದಕ್ಕೆ ಚುನಾವಣೆ ನಡೆಸಿದ ಆಡಳಿತವೇ ಹೊಣೆ. ಸೋಂಕು ಹೆಚ್ಚುತ್ತಿದೆ, ಹೀಗಾಗಿ ಚುನಾವಣೆ ಮುಂದೂಡಿ ಎಂದು ಸರ್ಕಾರ ಹೇಳಿದ್ದರೆ, ಆಯೋಗ ಚುನಾವಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಕೆಲವರಿಗೆ ಆತುರವಾಗಿ ಚುನಾವಣೆ ಮಾಡಬೇಕಿತ್ತು, ಅದಕ್ಕೆ ಶಿಕ್ಷಕರನ್ನು ಬಲಿ ಕೊಟ್ಟಿದ್ದಾರೆ ಎಂದು ಆರೋಪಿಸಿದರು.