ರಾಯಚೂರು: ನಾರಾಯಣಪುರ ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ಇಳಿಮುಖವಾಗಿದ್ದು, ರಾಯಚೂರು ಪ್ರವಾಹದ ಭೀತಿಯಿಂದ ದೂರವಾಗಿದೆ.
ಇಂದು ಬೆಳಗ್ಗೆ ಜಲಾಶಯಕ್ಕೆ 20 ಸಾವಿರ ಕ್ಯೂಸೆಕ್ ಒಳಹರಿವು ಹರಿದು ಬಂದಿದ್ದು, ಜಲಾಶಯದಿಂದ 2 ಗೇಟ್ಗಳ ಮೂಲಕ 10640 ಕ್ಯೂಸೆಕ್ ನೀರು ಹೊರ ಹರಿಸಲಾಗುತ್ತಿದೆ. ಇದರಿಂದ ರಾಯಚೂರು ಜಿಲ್ಲೆಯಲ್ಲಿ ಪ್ರವಾಹದ ಭೀತಿ ಕಡಿಮೆಯಾಗಿದೆ.
ಕೆಲ ದಿನಗಳಿಂದ ನಾರಾಯಣಪುರ ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗಿತ್ತು. ಇದರಿಂದ ರಾಯಚೂರು ಜಿಲ್ಲೆಯ ದೇವದುರ್ಗ, ಲಿಂಗಸೂಗೂರು, ರಾಯಚೂರು ತಾಲೂಕಿನ ನದಿ ಪಾತ್ರದ ಗ್ರಾಮಗಳು, ನಡುಗಡ್ಡೆ ಪ್ರದೇಶಗಳಿಗೆ ಪ್ರವಾಹ ಭೀತಿ ಎದುರಾಗಿತ್ತು. ಇದೀಗ ಜಲಾಶಯದ ಒಳಹರಿವಿನ ಪ್ರಮಾಣ ತಗ್ಗಿದ್ದರಿಂದ ಪ್ರವಾಹ ಭೀತಿ ದೂರವಾಗಿದೆ. ಒಂದು ವೇಳೆ ಜಲಾಶಯಕ್ಕೆ ಒಳಹರಿವು ಏರಿಕೆಯಾದಲ್ಲಿ ಮತ್ತೆ ಜಿಲ್ಲೆಗೆ ಪ್ರವಾಹ ಭೀತಿ ಎದುರಾಗಲಿದೆ.