ಹುಬ್ಬಳ್ಳಿ: ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಕಿಮ್ಸ್ ಆಸ್ಪತ್ರೆ ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು, ಕೋವಿಡ್ ನಿಂದ ಮೃತಪಟ್ಟಿರುವ ವ್ಯಕ್ತಿ ಶವವನ್ನು ಪ್ಯಾಕ್ ಮಾಡಿ ಹೊರಗಡೆಯೇ ಬಿಟ್ಟಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಹೌದು, ಕೊರೊನಾ ವೈರಸ್ ಎಲ್ಲೆಡೆಯೂ ಆತಂಕದ ವಾತಾವರಣ ಸೃಷ್ಟಿಸಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಿಮ್ಸ್ ಸಿಬ್ಬಂದಿ ಕೊವೀಡ್ ನಿಂದ ಮೃತಪಟ್ಟಿರುವ ವ್ಯಕ್ತಿ ಶವವನ್ನು ಕಿಮ್ಸ್ ಮಲ್ಟಿಸ್ಪೇಷಾಲಿಟಿ ಕಟ್ಟಡದ ಎದುರು ಪ್ಯಾಕ್ ಮಾಡಿ ಸ್ಟ್ರೇಚರ್ ಮೇಲೆ ಇಟ್ಟಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಓಡಾಡುವ ಸ್ಥಳದಲ್ಲಿ ಹೀಗೆ ಶವ ಬಿಟ್ಟಿರುವುದರಿಂದ ವೈರಸ್ ಹರಡುತ್ತದೆ ಎಂದು ಸಾರ್ವಜನಿಕರು ಆತಂಕಗೊಂಡಿದ್ದಾರೆ. ಕಿಮ್ಸ್ ನಿಷ್ಕಾಳಜಿಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.
ಇನ್ನು ಈ ಕುರಿತು ಕಿಮ್ಸ್ ಶವಗಾರ ವಿಭಾಗದ ಮುಖ್ಯಸರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಶವವನ್ನು ಸ್ಥಳಾಂತರ ಮಾಡುವ ಸಂದರ್ಭದಲ್ಲಿ ಸ್ಟ್ರೇಚರ್ ಮೇಲೆ ಇಡಲಾಗಿದೆ. ಆಗ ಯಾರೋ ಸಾರ್ವಜನಿಕರು ಫೋಟೋ ಕ್ಲಿಕ್ಕಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.