ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಸಿಎಂ ದೇವರಾಜ್ ಅರಸು ಜನ್ಮದಿನಕ್ಕೆ ಶುಭ ಕೋರಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ, ಟೆಲಿಕಾಂ ಕ್ರಾಂತಿ, ಕಂಪ್ಯೂಟರೀಕರಣ, ಪಂಚಾಯತ್ ರಾಜ್, ಮತದಾನ ವಯಸ್ಸಿನ ಇಳಿಕೆ ಮೊದಲಾದ ಕಾರ್ಯಕ್ರಮಗಳ ಮೂಲಕ ಬಲಶಾಲಿಯಾದ ಆಧುನಿಕ ಭಾರತ ಕಟ್ಟಿದ, ನಮಗೆಲ್ಲ ಅಭಿವೃದ್ದಿಯ ದಾರಿ ತೋರಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರಿಗೆ ಹುಟ್ಟುಹಬ್ಬ ದಿನದ ಗೌರವಪೂರ್ವಕ ನಮನಗಳು. ಹಾಗೆಯೇ ಅಧಿಕಾರ, ಸಂಪತ್ತು ಮತ್ತು ಅವಕಾಶದ ಸಮಾನ ಹಂಚಿಕೆಯ ಮೂಲಕ ಸಮಸಮಾಜ ನಿರ್ಮಾಣಕ್ಕೆ ಭದ್ರಬುನಾದಿ ಹಾಕಿಹೋದ ಪರಿವರ್ತನೆಯ ಹರಿಕಾರ ದಿವಂಗತ ಡಿ.ದೇವರಾಜ ಅರಸು ಅವರಿಗೆ, ಸಾಮಾಜಿಕ ನ್ಯಾಯದ ಬಂಡಿಯನ್ನು ಮುನ್ನಡೆಸುವ ಕಾಯಕಕ್ಕೆ ಕೈಜೋಡಿಸುವ ಮೂಲಕ ನಾವೆಲ್ಲ ಹುಟ್ಟುಹಬ್ಬದ ಶುಭಾಶಯ ಕೋರೋಣ, ಗೌರವ ಅರ್ಪಿಸೋಣ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟ್ವೀಟ್ ನಲ್ಲಿ, "ಭಾರತದ ಪ್ರಬಲ, ಸ್ವಾತಂತ್ರ್ಯ, ಸ್ವಾವಲಂಬಿ ಮತ್ತು ವಿಶ್ವದ ರಾಷ್ಟ್ರಗಳ ಮುಂಚೂಣಿಯಲ್ಲಿರುವ ಮಾನವಕುಲದ ಸೇವೆಯಲ್ಲಿ ನಾನು ಕನಸು ಕಾಣುತ್ತೇನೆ ಎಂದು ಹೇಳಿದ್ದ ದಾರ್ಶನಿಕ ಮಾಜಿ ಪ್ರಧಾನಿ ಮತ್ತು ಭಾರತ ರತ್ನ ರಾಜೀವ್ ಗಾಂಧಿ ಅವರ ಜನ್ಮ ವಾರ್ಷಿಕೋತ್ಸವದಂದು ನನ್ನ ವಿನಮ್ರ ಗೌರವ ಎಂದಿದ್ದಾರೆ. ಜೊತೆಗೆ ಋಣಮುಕ್ತ, ಭೂ ಸುಧಾರಣಾ ಕಾಯ್ದೆಗಳ ಮೂಲಕ ಜನರ ಮನದಲ್ಲಿ ಶಾಶ್ವತವಾಗಿ ನೆಲೆಸಿರುವ ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಶ್ರೀ ದೇವರಾಜ್ ಅರಸ್ ಅವರ ಜನ್ಮ ಜಯಂತಿಯಂದು ಅವರಿಗೆ ನನ್ನ ಗೌರವಪೂರ್ಣ ನಮನಗಳು. ಸಮಾಜದ ಶೋಷಿತ ವರ್ಗಗಳಿಗೆ ಸ್ಥಾನಮಾನ ಕಲ್ಪಿಸಿದ ಈ ಮಹಾನ್ ಮುತ್ಸದ್ದಿಯ ಬದುಕು ನಮಗೆಲ್ಲಾ ಮಾದರಿ ಎಂದಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟ್ವೀಟ್ನಲ್ಲಿ, ರಾಜೀವ್ ಗಾಂಧಿ ನಮ್ಮಂತಹ ಕೋಟ್ಯಂತರ ಭಾರತೀಯರಿಗೆ ಆದರ್ಶಪ್ರಾಯರು. ವಿಜ್ಞಾನ ಮತ್ತು ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರ ಎಂದು ಹೇಳಿ ನಮನ ಸಲ್ಲಿಸಿದ್ದಾರೆ. ಮತ್ತು ಮಾಜಿ ಸಿಎಂ ದೇವರಾಜ್ ಅರಸು ಅವರನ್ನು ನೆನಪಿಸಿಕೊಳ್ಳುವುದು ಅವರ ಜನ್ಮ ದಿನಾಚರಣೆಯ ಪವಿತ್ರ ಸಂದರ್ಭದಲ್ಲಿ ಅನಿವಾರ್ಯ. ಅವರು ಅನೇಕ ಯೋಜನೆಗಳ ಮೂಲಕ ವಂಚಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ತಲುಪಿಸುವ ಕಾರ್ಯ ಮಾಡಿದ್ದಾರೆ. ಪರಂಪರೆ, ಸಮಾನತೆ ಸಾಧಿಸುವತ್ತ ನಮ್ಮ ಪ್ರಯಾಣದಲ್ಲಿ ಇವರು ಹಾಕಿಕೊಟ್ಟ ದಾರಿ, ಮಾರ್ಗದರ್ಶನ ನೀಡುತ್ತದೆ ಎಂದಿದ್ದಾರೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿ, ರಾಷ್ಟ್ರದ ಅನೇಕ ಪ್ರಥಮಗಳಿಗೆ ಮುನ್ನುಡಿ ಬರೆದ, ಟೆಲಿಫೋನ್ ಕ್ರಾಂತಿಯ ಮೂಲಕ ಇಡೀ ದೇಶದ ದಿಕ್ಕನ್ನೇ ಬದಲಿಸಿದ, ತಂತ್ರಜ್ಞಾನದ ಮೂಲಕ ದೇಶದ ಅಸಂಖ್ಯಾತ ಯುವಕರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿಸಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನದ ಶುಭಾಶಯಗಳು. ರಾಜ್ಯ ಕಂಡ ಶ್ರೇಷ್ಟ ನಾಯಕ, ಹಾವನೂರು ಆಯೋಗ ರಚಿಸಿ ಹಿಂದುಳಿದ ವರ್ಗಗಳ ಅಭಿವೃದ್ಧಿ ಗೆ ಮುನ್ನುಡಿ ಬರೆದ ಸಾಮಾಜಿಕ ಕ್ರಾಂತಿಯ ಹರಿಕಾರ, ಗೇಣಿ ಶಾಸನ ತರುವ ಮೂಲಕ ಲಕ್ಷಾಂತರ ಭೂರಹಿತ ರೈತರಿಗೆ ಬದುಕು ಕಟ್ಟಿಕೊಟ್ಟ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸ್ ಅವರ ಜನ್ಮದಿನೋತ್ಸವದ ಶುಭಾಶಯಗಳು ಎಂದಿದ್ದಾರೆ.
ಇವರಲ್ಲದೇ ಇನ್ನೂ ಹಲವು ಕಾಂಗ್ರೆಸ್ ನಾಯಕರು ರಾಜೀವ್ ಗಾಂಧಿ ಹಾಗೂ ದೇವರಾಜ್ ಅರಸು ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ.