ಬೆಂಗಳೂರು : ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಕುರಿತು ಎಲ್ಲಾ 30 ಜಿಲ್ಲೆಗಳ ಹಿರಿಯ ಅಧಿಕಾರಿಗಳ ಜತೆ ನಾಳೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ.
ಗೃಹ ಕಚೇರಿ ಕೃಷ್ಣಾದಿಂದಲೇ ನಡೆಸಲಿರುವ ಸಭೆಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಪ್ರತಿ ಜಿಲ್ಲೆಯಿಂದಲೂ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲಿದ್ದಾರೆ ಬಿಎಸ್‌ವೈ.
ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮ, ಆಸ್ಪತ್ರೆಗಳ ಸುಧಾರಣೆ, ಚಿಕಿತ್ಸಾ ಸೌಲಭ್ಯ, ಸಮಸ್ಯೆಗಳು, ಕೋವಿಡ್ ಪಾಸಿಟಿವ್ ದರ, ಕೋವಿಡ್ ಮರಣದ ದರ, ಐಸಿಯು ಬೆಡ್‌ಗಳ ಕೊರತೆ, ಆಮ್ಲಜನಕದ ಕೊರತೆ ಸೇರಿ ವಿಸ್ತೃತ ಚರ್ಚೆಯನ್ನು ಸಿಎಂ ನಡೆಸಲಿದ್ದಾರೆ. ಅಗತ್ಯ ಔಷಧಿ ಪೂರೈಕೆ, ಯಂತ್ರೋಪಕರಣ ವ್ಯವಸ್ಥೆ ಸೇರಿ ಬೇಕಿರುವ ಸವಲತ್ತುಗಳ ಕುರಿತು ಸಮಾಲೋಚಿಸಲಾಗುತ್ತದೆ.
ಶುಕ್ರವಾರ ಮಳೆಹಾನಿ ಕುರಿತು ಸಿಎಂ ಸಭೆ ನಡೆಸಲು ನಿರ್ಧರಿಸಿದ್ದಾರೆ. ಮಳೆ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಡಳಿತದ ಜೊತೆ ಸಿಎಂ ವಿಡಿಯೋ ಸಂವಾದ ನಡೆಸಿ ಕುಂದು ಕೊರತೆ ಆಲಿಸಲಿದ್ದಾರೆ. ಅಗತ್ಯ ಪರಿಹಾರ ಕಲ್ಪಿಸುವ ಜೊತೆ ಸರ್ಕಾರದಿಂದ ನೆರವು ನೀಡುವ ಕುರಿತು ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.