ವಿಜಯಪುರ: ಭೀಮಾತೀರದ ಚಿನ್ನದ ವ್ಯಾಪಾರಿಗೆ 5 ಕೋಟಿ ರೂ.ಗಾಗಿ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಹಾದೇವ ಬೈರಗೊಂಡಗೆ ಜಾಮೀನು ಮಂಜೂರಾಗಿದೆ.
ವಿಜಯಪುರ ಜಿಲ್ಲಾ ನ್ಯಾಯಾಲಯದಿಂದ ಈ ಜಾಮೀನು ಮಂಜೂರಾಗಿದೆ. ಇಂದು ಮಧ್ಯಾಹ್ನ ಆರೋಪಿ ಮಹಾದೇವ ಸಾಹುಕಾರ್ ಬೈರಗೊಂಡ ದರ್ಗಾ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಮಹಾದೇವ ಸಾಹುಕಾರ ಭೈರಗೊಂಡಗೆ ನ್ಯಾಯಾಧೀಶರಾದ ಸದಾನಂದ ನಾಯಕ ಅವರು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ನ್ಯಾಯವಾದಿ ಎಸ್.ಆರ್ ಕೋರಿ ಅವರು ಮಹಾದೇವ ಭೈರಗೊಂಡ ಪರ ವಕಾಲತ್ತು ವಹಿಸಿದ್ದಾರೆ.
ಇಂಡಿ ಪಟ್ಟಣದ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆ ತನಗೆ 5 ಕೋಟಿ ರೂ. ನೀಡುವಂತೆ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಲಕ್ಷ್ಮೀಕಾಂತ, ಭೀಮಾತೀರದ ಹಂತಕ ಬಾಗಪ್ಪ ಹರಿಜನ ಹಾಗೂ ಮಹಾದೇವ ಸಾಹುಕಾರ ಭೈರಗೊಂಡ ವಿರುದ್ಧ ದೂರು ದಾಖಲಾಗಿತ್ತು. ಪ್ರಕರಣದ 3ನೇ ಆರೋಪಿಯಾಗಿ ಮಹಾದೇವ ಬೈರಗೊಂಡನನ್ನು ಚಡಚಣ ಪೊಲೀಸರು ಬಂಧಿಸಿದ್ದರು. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಲಕ್ಷ್ಮೀಕಾಂತ್ ಅಲಿಯಾಸ್ ಕಾಂತುಗೌಡ ಹಾಗೂ ಹಂತಕ ಬಾಗಪ್ಪ ಹರಿಜನ್ ನನ್ನು ಬಂಧಿಸಲು ಪೊಲೀಸರು ಜಾಲ ಬೀಸಿದ್ದಾರೆ.
ಜುಲೈ 22 ರಂದು ಮಹಾದೇವ ಬೈರಗೊಂಡನನ್ನು ಪೊಲೀಸರು ಬಂಧಿಸಿದ್ದರು. ಜುಲೈ 27 ರಂದು ಇಂಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕಾರವಾಗಿತ್ತು. ಕೊನೆಗೂ ಮಹಾದೇವ ಸಾಹುಕಾರ ಭೈರಗೊಂಡಗೆ ಈಗ ಜಾಮೀನು ಮಂಜೂರು ಆಗಿದೆ.