ಬೆಂಗಳೂರು: ನಟಿ ರಾಗಿಣಿ ಅವರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆಯೇ ಹೊರತು ಅವರು ನಮ್ಮ ಪಕ್ಷದ ಸದಸ್ಯೆ ಅಲ್ಲ ಎಂದು ಡಿಸಿಎಂ ಡಾ. ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟಿ ರಾಗಿಣಿ ನಮ್ಮ ಪಕ್ಷದ ಸದಸ್ಯೆಯಲ್ಲ, ಚುನಾವಣಾ ಪ್ರಚಾರದಲ್ಲಿ ಸಿನಿಮಾ ಸ್ಟಾರ್ ಗಳು ಭಾಗವಹಿಸುತ್ತಾರೆ. ಎಲ್ಲ ಪಕ್ಷಗಳಲ್ಲೂ ಸಿನಿಮಾ ಸ್ಟಾರ್ ಗಳು ಭಾಗವಹಿಸುತ್ತಾರೆ. ಇದರಲ್ಲಿ ವಿಶೇಷ ಏನು ಇಲ್ಲ ಎಂದರು.
ಡ್ರಗ್ಸ್ ಇವತ್ತು ಸ್ಯಾಂಡಲ್ ವುಡ್ ಅಷ್ಟೇ ಅಲ್ಲ, ಎಲ್ಲಾ ಕಡೆಗಳಲ್ಲೂ ವ್ಯಾಪಿಸಿದೆ. ಅದನ್ನು ಸಂಪೂರ್ಣವಾಗಿ ಮಟ್ಟಹಾಕಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಸಹ ಕೆಲಸ ಮಾಡುತ್ತಿದೆ ಎಂದು ಡಿಸಿಎಂ ತಿಳಿಸಿದರು.
ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿಯೂ ಡ್ರಗ್ಸ್ ದಂಧೆ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬರುತ್ತಿವೆ. ನಾವು ಅದನ್ನು ತಡೆಗಟ್ಟಲು ಮುಂದಾಗಿದ್ದೇವೆ. ಕಾಲೇಜ್ ಗಳಲ್ಲಿ ಇದನ್ನು ತಡೆಯಲು ಸಾಕಷ್ಟು ಪ್ರಯತ್ನಗಳು ನಡೆದಿದೆ. ಇಲ್ಲವಾದರೆ ಇದೊಂದು ಪಿಡುಗಾಗಿ ಪರಿಣಮಿಸುತ್ತದೆ. ಡ್ರಗ್ಸ್ ದಂಧೆಯನ್ನು ಸರ್ಕಾರ ಸಂಪೂರ್ಣ ಮಟ್ಟಹಾಕಲಿದೆ ಎಂದು ಹೇಳಿದರು.
ಬಿಬಿಎಂಪಿ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ಚುನಾವಣೆ ಕೆಲಸಗಳು ನಡೆಯುತ್ತಿವೆ. ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ನಾವು ಪ್ರತ್ಯೇಕ ಬಿಬಿಎಂಪಿ ಕಾಯ್ದೆ ತರುತ್ತಿದ್ದೇವೆ. ಕಳೆದ ಬಾರಿಯೇ ಇದನ್ನು ಮಂಡಿಸಿದ್ದೆವು, ಈ ಬಾರಿ ಅನುಮತಿ ಸಿಕ್ಕರೆ ಈ ಕಾಯ್ದೆಯನ್ನು ಜಾರಿಗೆ ತರುತ್ತೇವೆ. ಈ ಕಾಯಿದೆ ಮೂಲಕ ಪರಿಹಾರ ಕಂಡುಕೊಂಡು ಬೆಂಗಳೂರು ಅಭಿವೃದ್ಧಿ ಪಡಿಸಬೇಕಿದೆ ಎಂದು ಹೇಳಿದರು.