ಮಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬರುವವರ ಸಂಖ್ಯೆ ಹೆಚ್ಚಿದೆ. ಇದರ ನಡುವೆ ಕೊರೊನಾ ಚಿಕಿತ್ಸೆಯ ಬಳಿಕ ಉಳಿಯುವ ಬಯೋ ಮೆಡಿಕಲ್ ವೇಸ್ಟ್ ಪ್ರಮಾಣದಲ್ಲಿ ಕೂಡ ಹೆಚ್ಚಳವಾಗಿದೆ.
ಆಸ್ಪತ್ರೆಗಳಲ್ಲಿ ಬಳಸಲಾಗುವ ಸಿರಿಂಜ್, ಮಾಸ್ಕ್, ಗ್ಲೌಸ್, ಶಸ್ತ್ರಚಿಕಿತ್ಸೆಗೆ ಬಳಸಲಾದ ಔಷಧೀಯ ವಸ್ತುಗಳು ಸೇರಿದಂತೆ ಹಲವು ವಸ್ತುಗಳು ಉಪಯೋಗದ ಬಳಿಕ ತ್ಯಾಜ್ಯವಾಗುತ್ತವೆ. ಆದರೆ ಈ ತ್ಯಾಜ್ಯವನ್ನು ನಿರ್ವಹಣೆ ಮಾಡಲು ಸರಕಾರದ ನಿರ್ದಿಷ್ಟ ಮಾರ್ಗಸೂಚಿಗಳಿವೆ. ಸಾಧಾರಣವಾಗಿ ಎಲ್ಲಾ ಆಸ್ಪತ್ರೆಗಳು ಈ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಿ ಬಯೋ ಮೆಡಿಕಲ್ ವೇಸ್ಟ್ ವಿಲೇವಾರಿ ಕಾರ್ಯಗಳನ್ನು ಮಾಡುತ್ತಿರುತ್ತವೆ.
ಆದರೆ ಕೊರೊನಾ ವೈರಸ್ ಹಾವಳಿ ಬಳಿಕ ಈ ಚಿಕಿತ್ಸೆಗೆ ಬಳಸಲಾದ ವಸ್ತುಗಳನ್ನು ನಿರ್ವಹಣೆ ಮಾಡಲು ಹೆಚ್ಚುವರಿ ನಿಯಮಗಳಿವೆ. ಇತರ ಬಯೋ ಮೆಡಿಕಲ್ ವೇಸ್ಟ್ ನಿರ್ವಹಣೆ ವೇಳೆ ಸಿಂಗಲ್ ಲೇಯರ್ ಬ್ಯಾಗ್ ಮೂಲಕ ವಿಲೇವಾರಿ ಮಾಡಲಾದರೆ ಕೋವಿಡ್ಗೆ ಬಳಸಲಾದ ತ್ಯಾಜ್ಯ ವಿಲೇವಾರಿಗೆ ಡಬಲ್ ಲೇಯರ್ ಬ್ಯಾಗನ್ನು ಬಳಸಲಾಗುತ್ತದೆ ಮತ್ತು ಈ ಬ್ಯಾಗ್ ಮೇಲೆ ಕೋವಿಡ್-19 ಎಂದು ದೊಡ್ಡಕ್ಷರದಲ್ಲಿ ಬರೆದು ಮಾಡಬೇಕಾಗುತ್ತದೆ.
ಕೊರೊನಾ ವಸ್ತುಗಳ ಬಯೋ ಮೆಡಿಕಲ್ ವೇಸ್ಟ್ ಸಂಗ್ರಹಣೆಗೆ ಆಸ್ಪತ್ರೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿ ಅದನ್ನು ರಾಸಾಯನಿಕ ಬಳಸಿ 72 ಗಂಟೆಗಳ ಕಾಲ ಇಟ್ಟು ಡಿಸ್ ಇನ್ಪೆಕ್ಟ್ ಮಾಡಲಾಗುತ್ತದೆ. ಆಸ್ಪತ್ರೆಗಳಲ್ಲಿ ಬಯೋ ಮೆಡಿಕಲ್ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಗೆ ಇರುವ ಮಾರ್ಗದರ್ಶನ ಜೊತೆಗೆ ಮನೆಯಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿರುವವರ ಬಳಕೆಯ ಮೆಡಿಜಲ್ ತ್ಯಾಜ್ಯ ವಸ್ತುಗಳನ್ನು ಆಯಾ ಸ್ಥಳೀಯ ಸಂಸ್ಥೆಗಳು ಮಾಡಬೇಕಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಕಾರಣದಿಂದ ಉತ್ಪತ್ತಿಯಾಗುವ ಮೆಡಿಕಲ್ ವೇಸ್ಟನ್ನು ವಿಲೇವಾರಿ ಮಾಡುವ ಪ್ರಕ್ರಿಯೆ ಸರಕಾರದ ಮಾರ್ಗಸೂಚಿಯಂತೆ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ ಕುಮಾರ್ ತಿಳಿಸಿದ್ದಾರೆ.