ಬೆಂಗಳೂರು: ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಬಂಧಿತರ ಸಂಖ್ಯೆ ಏರಿಕೆಯಾಗುತ್ತಿದೆ. ನಿನ್ನೆ ರಾತ್ರಿ ಕೂಡ ಡಿ.ಜೆ.ಳ್ಳಿ ಹಾಗೂ ಸಿಸಿಬಿ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ. ಮತ್ತೊಂದೆಡೆ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆಯಲ್ಲಿ ಎಫ್ಐಆರ್ ಸಂಖ್ಯೆ 80ಕ್ಕೆ ಏರಿಕೆಯಾಗಿದೆ.
ಇಂದಿನಿಂದ ಬಂಧಿತ ಕೆಲ ಪ್ರಮುಖ ಆರೋಪಿಗಳು ಪೊಲೀಸರ ವಿರುದ್ಧ ಕಾನೂನು ಸಮರ ನಡೆಸಲು ಮುಂದಾಗಿದ್ದಾರೆ. ಕುಟುಂಬಸ್ಥರ ಮುಖಾಂತರ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಹಾಕಿ ಡಿ.ಜೆ.ಹಳ್ಳಿ ಗಲಭೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬ ವಾದ ಮಂಡಿಸಲು ರೆಡಿಯಾಗಿದ್ದಾರೆ.
ಇತ್ತ ಪೊಲೀಸರು ಬಂಧಿತ ಸುಮಾರು 380ಕ್ಕೂ ಹೆಚ್ಚು ಆರೋಪಿಗಳ ಮೇಲೆ ರೌಡಿಶೀಟ್ ಹಾಗೆಯೇ ಭಯೋತ್ಪಾದಕರ ಮೇಲೆ ಹಾಕುವ ಸೆಕ್ಷನ್ಗಳನ್ನು ಹಾಕಿದ್ದಾರೆ. ಈ ಕಾಯ್ದೆಗಳ ಅನ್ವಯ ಕೇಸ್ ಹಾಕಿದ ಕಾರಣ ಆರೋಪಿಗಳಿಗೆ ಬೇಗ ಜಾಮೀನು ಸಿಗುವುದಿಲ್ಲ.
ಇಂದು ಆರೋಪಿಗಳ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋದ್ರೆ ಅದಕ್ಕೆ ಬೇಕಾದ ಪೇಪರ್ ವರ್ಕ್ಗಳನ್ನು ಪೊಲೀಸರು ರೆಡಿ ಮಾಡಿಕೊಂಡಿದ್ದಾರೆ. ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿರುವುದಕ್ಕೆ ಸಾಕ್ಷಿ ಸಮೇತ ನ್ಯಾಯಾಲಯಕ್ಕೆ ಒಪ್ಪಿಸಲಿದ್ದಾರೆ.
ಮತ್ತೊಂದೆಡೆ ಡಿಜಿ ಪ್ರವೀಣ್ ಸೂದ್ ಅವರು ಕೂಡ ಆರೋಪಿಗಳು ಸಾವಿರ ಕಿ.ಮೀ. ದೂರದಲ್ಲಿ ಅಡಗಿದ್ದರೂ ಬಿಡುವುದಿಲ್ಲ. ಹಾಗೆಯೇ ಪೊಲೀಸರ ಹಾಗೂ ಸಾರ್ವಜನಿಕರ ಆಸ್ತಿ ಪಾಸ್ತಿಗಳನ್ನು ಹಾನಿ ಮಾಡಿರುವವರಿಗೆ ಶಿಕ್ಷೆಯಾಗಬೇಕೆಂದು ಹೇಳಿದ್ದಾರೆ. ಹೀಗಾಗಿ ಇಂದು ಆರೋಪಿಗಳು ಕಾನೂನು ಸಮರ ನಡೆಸಲು ಮುಂದಾದರೆ ಪೊಲೀಸರು ಆರೋಪಿಗಳಿಗೆ ಟಕ್ಕರ್ ಕೊಡಲು ಮುಂದಾಗಿದ್ದಾರೆ.