ಚಾಮರಾಜನಗರ: ಸೋಂಕಿತರನ್ನು ಮಾತನಾಡಿಸಿ, ಅವರಿಗೆ ಧೈರ್ಯ ತುಂಬಿದ್ದೇನೆ. ಕೆಲ ಕೊರತೆಗಳಿದ್ದು ಸರಿಪಡಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹೇಳಿದರು.
ಪಿಪಿಇ ಕಿಟ್ ಧರಿಸಿಕೊಂಡು ಜಿಲ್ಲಾಸ್ಪತ್ರೆಯಲ್ಲಿನ ಕೊರೊನಾ ಸೋಂಕಿತರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸದ್ಯ ಆಸ್ಪತ್ರೆಯಲ್ಲಿ 167 ಮಂದಿ ಸೋಂಕಿತರಿದ್ದಾರೆ. ಇಂದು 20 ಬೆಡ್ ಖಾಲಿಯಾಗಲಿವೆ. ಇನ್ನೆರಡು ದಿನಗಳಲ್ಲಿ ಮೆಡಿಕಲ್ ಕಾಲೇಜಿನಲ್ಲಿ 500 ಹಾಸಿಗೆಗಳ ಕೋವಿಡ್ ಆಸ್ಪತ್ರೆಯೂ ಪ್ರಾರಂಭವಾಗಲಿದೆ ಎಂದು ತಿಳಿಸಿದರು
ಆಮ್ಲಜನಕದ ಕೊರತೆ ಬಗ್ಗೆ ಮಾತನಾಡಿ, ಆರೋಗ್ಯ ಸಚಿವ ಸುಧಾಕರ್ ಈಗಾಗಲೇ ನಿತ್ಯ 7 ಸಾವಿರ ಲೀಟರ್ ಆಮ್ಲಜನಕ ಪೂರೈಸುವುದಾಗಿ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಆಮ್ಲಜನಕ ಬೇಡಿಕೆ ಕಡಿಮೆ ಇರುವುದರಿಂದ ಅಲ್ಲಿ ಪೂರೈಕೆಯಾಗುವ ಆಮ್ಲಜನಕವೂ ರಾಜ್ಯಕ್ಕೆ ಸಿಗಲಿದೆ. ರಾಜ್ಯದ ಥರ್ಮಲ್ ಪ್ಲಾಂಟ್ ಕೂಡ ಆಕ್ಸಿಜನ್ ಉತ್ಪಾದಿಸುತ್ತಿದ್ದು, ಕೈಗಾರಿಕೆಗೆ ಪೂರೈಕೆಯಾಗುತ್ತಿರುವ ಆ್ಯಕ್ಸಿಜನ್ ಕೂಡ ಸಿಗಲಿದೆ ಎಂದು ತಿಳಿಸಿದರು. ಈ ದುರಂತ ನನ್ನ ರಾಜಕೀಯ ಜೀವನದ ಒಂದು ಕಹಿ ನೆನಪು. ಇದಾಗಬಾರದಾಗಿತ್ತು ಎಂದರು.