ಶಿವಮೊಗ್ಗ : ಬೈಕ್ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ದಾರುಣವಾಗಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ತಾಲೂಕು ಬೆಳಲಕಟ್ಟೆ ಗ್ರಾಮದ ಬಳಿ ನಡೆದಿದೆ. ಬೆಳಲಕಟ್ಟೆ ಗ್ರಾಮದ ಮಹೇಶ್ವರಪ್ಪ(70) ಕೊಲೆಯಾದ ವ್ಯಕ್ತಿ. ಆರೋಪಿಗಳಾದ ಕುಮಾರ್ ಹಾಗೂ ಕಾರ್ತಿಕ್ ಮೃತನ ಸೋದರ ಸಂಬಂಧಿಗಳಾಗಿದ್ದಾರೆ.
ಮಹೇಶ್ವರಪ್ಪ ಭಾನುವಾರ ಬೆಳಲಕಟ್ಟೆಯಿಂದ ಬಿಕ್ಕೂನಹಳ್ಳಿಯ ತನ್ನ ಅಳಿಯನ ಮನೆಗೆ ಬೈಕ್ನಲ್ಲಿ ಹೋಗುವಾಗ ದಾಯಾದಿಗಳಾದ ಕುಮಾರ್ ಹಾಗೂ ಕಾರ್ತಿಕ್ ಎಂಬುವರು ಮಹೇಶ್ವರಪ್ಪನವರಿಗೆ ಪೆಟ್ರೋಲ್ ಎರಚಿ, ಬೆಂಕಿ ಹಚ್ಚಿದ್ದಾರೆ. ಬೆಂಕಿಯಿಂದ ಗಾಯಗೊಂಡು ಕಿರುಚಾಡುತ್ತಿದ್ದ ಮಹೇಶ್ವರಪ್ಪನನ್ನು ದಾರಿಯಲ್ಲಿ ಹೋಗುವವರು ರಕ್ಷಿಸಿದ್ದಾರೆ. ಈ ವೇಳೆಗಾಗಲೇ ಮಹೇಶ್ವರಪ್ಪನವರ ದೇಹ ಸಂಪೂರ್ಣ ಸುಟ್ಟು ಹೋಗಿತ್ತು.
ತನಗೆ ಸುಟ್ಟಗಾಯಗಳಾಗಿದ್ದರು ಸಹ ಮಹೇಶ್ವರಪ್ಪ ಸ್ಥಳದಲ್ಲಿದ್ದವರಿಗೆ ತನ್ನನ್ನು ಕುಮಾರ ಹಾಗೂ ಕಾರ್ತಿಕ್ ಎಂಬುವರು ಪೆಟ್ರೋಲ್ ಹಾಕಿ ಸುಟ್ಟಿದ್ದಾರೆ ಎಂದು ಹೇಳಿಕೆಯನ್ನು ನೀಡಿದ್ದಾರೆ. ಇದನ್ನು ಕೆಲವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ತಕ್ಷಣ ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಅಲ್ಲಿನ ವೈದ್ಯರು ದೇಹ ಸಂಪೂರ್ಣ ಸುಟ್ಟಿದೆ ಚಿಕಿತ್ಸೆ ಕಷ್ಟ ಎಂದಾಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಕುರಿತು ಮೃತನ ಕುಟುಂಬಸ್ಥರು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಹೇಶ್ವರಪ್ಪ ಅವರು ಅಳಿಯನ ತೋಟಕ್ಕೆ ಹೊಸ ಮೋಟಾರನ್ನು ತರಲು ಜೇಬಿನಲ್ಲಿ 50 ಸಾವಿರ ರೂಗಳನ್ನು ತೆಗೆದುಕೊಂಡು ಬೆಳಲಕಟ್ಟೆಯಿಂದ ಬಿಕ್ಕೂನಹಳ್ಳಿಗೆ ಕೊಮ್ಮನಾಳು ಮಾರ್ಗವಾಗಿ ಹೋಗುವಾಗ ಕುಮಾರ್ ಹಾಗೂ ಕಾರ್ತಿಕ್ ಎಂಬುವರು ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದು ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾರೆ. ಕುಮಾರ್ ಹಾಗೂ ಕಾರ್ತಿಕ್ ಸಂಬಂಧಿಕರಾಗಬೇಕು. ಬೆಳಲಕಟ್ಟೆ ಗ್ರಾಮದಲ್ಲಿ ಮೃತ ಮಹೇಶ್ವರಪ್ಪನವರಿಗೆ ಸೇರಿದ 3 ಎಕರೆ ಜಮೀನು ಇದೆ. ಈ ಜಮೀನು ವಿವಾದ ಕೋರ್ಟ್ನಲ್ಲಿದೆ. ಇದರ ತೀರ್ಪು ಮಹೇಶ್ವರಪ್ಪನವರ ಪರ ಆಗಲಿದೆ ಎಂದು ತಿಳಿದು ಕೊಲೆ ಮಾಡಿದ್ದಾರೆ. ಆರೋಪಿಗಳಿಗೆ ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಸಂಬಂಧಿಕರಾದ ಸಾವಿತ್ರಮ್ಮ ಹೇಳಿದ್ದಾರೆ.
ಪ್ರತ್ಯೇಕ ಪ್ರಕರಣ- ತಂಗಿ ಮಗುವನ್ನೇ ಕೊಂದ ಅಕ್ಕ : ಇತ್ತೀಚೆಗೆ ವಿವಾಹೇತರ ಸಂಬಂಧ ಮುಂದುವರಿಸದಂತೆ ತಿಳಿ ಹೇಳಿದ್ದ ತಂಗಿಯ ಮಗುವನ್ನೇ ಅಕ್ಕ ಕೊಲೆ ಮಾಡಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿತ್ತು. ಕೊಲೆ ಆರೋಪಿ ಅಕ್ಕ ಅಂಬಿಕಾ ಎಂದು ಗುರುತಿಸಲಾಗಿತ್ತು. ತಂಗಿ ಅನಿತಾ ಮಗನನ್ನು ಕಳೆದುಕೊಂಡವರು. ಕುಡುಕ ಗಂಡಂದಿರ ಕಾಟ ತಾಳಲಾರದೇ ತವರು ಮನೆ ಸೇರಿದ್ದ ಇಬ್ಬರು ಒಟ್ಟಿಗೆ ವಾಸವಿದ್ದರು. ಈ ವೇಳೆ ರಾತ್ರಿ ಯಾವ್ ಯಾವುದೋ ಸಮಯಕ್ಕೆ ಮನೆಗೆ ಆರೋಪಿ ಬರುತ್ತಿದ್ದಳು. ಇದರಿಂದ ವಿವಾಹೇತರ ಸಂಬಂಧದ ಶಂಕೆ ಮೂಡಿದ್ದು, ಅಂಬಿಕಾಳಿಗೆ ಅನಿತಾ ಬೈದಿದ್ದಳು. ಇದೇ ಕಾರಣಕ್ಕೆ ಮಗುವನ್ನು ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಲಾಗಿತ್ತು.
ಇದನ್ನೂ ಓದಿ : ವಿವಾಹೇತರ ಸಂಬಂಧ ಬೇಡ ಎಂದ ಸಹೋದರಿ: ತಂಗಿಯ ಮಗನನ್ನು ಕೊಲೆ ಮಾಡಿದ ಅಕ್ಕ