ಶಿವಮೊಗ್ಗ: ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆ, ಮಹನಗರ ಪಾಲಿಕೆ ಆಯೋಜಿಸಲಾಗಿದ್ದ ವಿಶ್ವ ಕೌಶಲ್ಯಾಭಿವೃದ್ಧಿ ದಿನಾಚರಣೆ ಕಾರ್ಯಕ್ರಮವನ್ನು ಉಪಮೇಯರ್ ಎಸ್.ಎನ್ ಚೆನ್ನಬಸಪ್ಪ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೌಶಲ್ಯ ದಿನಾಚರಣೆ ಆಚರಿಸಿ ಮುಗಿಸುವುದಾಗದೆ, ಇಲ್ಲಿಂದಲೇ ನೂತನ ಪ್ರಯೋಗಗಳ ಚಾಲನೆಗೆ ಯುವಕರು ಪ್ರೇರಣೆಯಾಗುವಂತಹ ಕಾರ್ಯಕ್ರಮವಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಪ್ರೋತ್ಸಾಹಿಸಬೇಕು. ಜೊತೆಯಲ್ಲಿ ವಿದ್ಯಾರ್ಥಿಗಳು ಪೂರಕ ಆಸಕ್ತಿ ವಹಿಸಬೇಕು. ಇಂದಿನ ಯುವ ಜನರ ಕೌಶಲ್ಯದ ಆಧಾರದ ಮೇಲೆ ದೇಶದ ಭವಿಷ್ಯ ನಿಂತಿದೆ. ಹಾಗೂ ವಿಶ್ವವೇ ನಮ್ಮ ದೇಶದ ಯುವಕರ ಕೌಶಲ್ಯದ ಮೇಲೆ ಕುತೂಹಲವನ್ನಿರಿಸಿದೆ. ಇದನ್ನು ಸಾಧಿಸಿ ತೋರಿಸುವತ್ತ ನಮ್ಮ ಯುವಕರು ಕಾರ್ಯ ಪ್ರವೃತ್ತರಾಗಬೇಕು ಎಂದರು.