ಶಿವಮೊಗ್ಗ: ಲಾಕ್ಡೌನ್ನಿಂದ ತತ್ತರಿಸಿರುವ ಜನಸಾಮಾನ್ಯರ ಕಲ್ಯಾಣಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಜಿಲ್ಲೆಯಲ್ಲಿ 14 ಸಾವಿರಕ್ಕೂ ಅಧಿಕ ಹೆಚ್ಚು ಆಟೋ ಚಾಲಕರು, 12 ಸಾವಿರಕ್ಕೂ ಹೆಚ್ಚು ಲಾರಿ ಚಾಲಕರು ಹಾಗೂ ಕ್ಲೀನರ್ ಸೇರಿದಂತೆ ಎಲ್ಲಾ ಸ್ಥರದ ವ್ಯಾಪಾರಸ್ಥರು ಹಾಗೂ ಕಾರ್ಮಿಕರ ಸಂಕಷ್ಟಕ್ಕೆ ಸರ್ಕಾರ ಧಾವಿಸಿ ನೆರವು ನೀಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದರೊಂದಿಗೆ ನೋಂದಾಯಿತ ಅಸಂಘಟಿತ ಕಾರ್ಮಿಕರ ಖಾತೆಗೆ ಹಣವನ್ನು ಸರ್ಕಾರ ಜಮಾ ಮಾಡುತ್ತಿದೆ. ಆದರೆ ಕೆಲವೇ ಬೆರಳೆಣಿಕೆಯಷ್ಟು ಜನರಿಗೆ ಈ ಯೋಜನೆ ತಲುಪುತ್ತಿದೆ. ಇನ್ನೂ ಅನೇಕ ಅಸಂಘಟಿತ ಕಾರ್ಮಿಕರು ನೋಂದಣಿ ಇಲ್ಲದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಈಗಾಗಲೇ ಜನ ತತ್ತರಿಸಿದ್ದು, ಸರ್ಕಾರ ಆತ್ಮಸ್ಥೈರ್ಯ ತುಂಬುವ ಮಾತುಗಳನ್ನು ಆಡುತ್ತಿದೆ. ಆದರೆ ಇಂತಹ ಕುಟುಂಬಗಳಿಗೆ ಶಕ್ತಿ ತುಂಬುವಂತಹ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜನರು ರಸ್ತೆಗಿಳಿದು ಹೋರಾಟ ಮಾಡುವುದು ಅನಿವಾರ್ಯವೆಂದು ಎಚ್ಚರಿಸಿದರು.