ಶಿವಮೊಗ್ಗ: ಇನ್ನೂ ಹದಿನೈದು ದಿನದಲ್ಲಿ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸುವ ಹೊಣೆ ನನ್ನದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಶಿವಮೊಗ್ಗ ನಗರದ ಈಡಿಗರ ಭವನದಲ್ಲಿ ಆಯೋಜಿಸಿದ್ದ ಶರಾವತಿ ಮುಳುಗಡೆ ಸಂತ್ರಸ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಇನ್ನೂ ಹದಿನೈದು ದಿನದಲ್ಲಿ ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ. ಯಾವನೋ ಪಾದಯಾತ್ರೆ ಮಾಡುತ್ತಿದ್ದಾನೆ, ಅವರಿಗೆ ಪ್ರಶ್ನೆ ಕೇಳುತ್ತೇನೆ ನೀವು ಅಧಿಕಾರದಲ್ಲಿದ್ದಾಗ ಯಾಕೇ ಈ ಸಮಸ್ಯೆ ಬಗೆಹರಿಸಲಿಲ್ಲ ಎಂದು. ಪಾದಯಾತ್ರೆಯನ್ನ ರಾಜಕೀಯ ಡೊಂಬರಾಟ ಮಾಡಬೇಡಿ. ಶರಾವತಿ ಸಂತ್ರಸ್ತರ ನೇರವಿಗೆ ಬರುತ್ತೇವೆ, ನಾವು ರೈತರಿಗೆ ಅನ್ಯಾಯ ಆಗಲು ಬಿಡೋದಿಲ್ಲ ಎಂದು ಹೇಳುತ್ತೀರಾ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದ ಮೂಲಕ ಪ್ರಸ್ತಾವನೆ ಸಲ್ಲಿಸಿ ಸಮಸ್ಯೆ ಬಗೇಹರಿಸುತ್ತವೆ ಎಂಬ ಕಾಂಗ್ರೆಸ್ ಅವರ ಸಿದ್ದಾಂತ ಸಮಸ್ಯೆಯನ್ನು ಸಮಸ್ಯೆಯಾಗಿಯೇ ಉಳಿಬೇಕು ಎನ್ನುವ ಸಿದ್ದಾಂತ. ಆದರೆ, ನಮ್ಮ ಸಿದ್ದಾಂತ ರೈತರ ಸಮಸ್ಯೆಯನ್ನು ಬಗೆಹರಿಸುವ ಸಿದ್ಧಾಂತ ಹಾಗಾಗಿ ಯಾರ ಮಾತು ಕೇಳಬೇಡಿ ಎಂದರು. ಅಗತ್ಯ ಬಿದ್ದರೆ ದೆಹಲಿಗೆ ಹೋಗಿ ಮತ್ತೊಮ್ಮೆ ಮಾತಾಡುತ್ತೇನೆ ಈ ಸಮಸ್ಯೆ ಬಗೆಹರಿಸುವುದು ನನ್ನ ಜವಾಬ್ದಾರಿ ನಾನು ಬಗೇಹರಿಸುತ್ತೇನೆ ಎಂದು ಇದೇ ವೇಳೆ ಮಾಜಿ ಸಿಎಂ ಭರವಸೆ ನೀಡಿದರು.
ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ: ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಶೀಘ್ರದಲ್ಲೇ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸುತ್ತೇವೆ. ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಅರವತ್ತು ವರ್ಷದ ಸಮಸ್ಯೆಯನ್ನು ನಮ್ಮ ಕಾಲದಲ್ಲೇ ಮುಗಿಬೇಕು ಅಂತ ಇತ್ತು ಅನಿಸುತ್ತೇ ಹಾಗಾಗಿ ಶೀಘ್ರದಲ್ಲೇ ಸಮಸ್ಯೆಯನ್ನು ನಾವು ಬಗೆಹರಿಸುತ್ತೇವೆ ಎಂದರು.
ಚುನಾವಣೆ ಹತ್ತಿರ ಬಂದಾಗ ಮಾತ್ರ ಕಾಂಗ್ರೆಸ್ ನವರಿಗೆ ಸಮಸ್ಯೆ ಕಾಣುತ್ತೆ. ಈ ರೀತಿಯಾಗಿ ಕಾಂಗ್ರೆಸ್ ಕಳೆದ ಅರವತ್ತು ವರ್ಷಗಳಿಂದ ಜನರ ಜೀವನದ ಜೊತೆ ಆಟ ಆಡುತ್ತಾ ಬರುತ್ತಿದ್ದಾರೆ. ಯಾವ ಪುರುಷಾರ್ಥ ಕ್ಕೆ ಪಾದಯಾತ್ರೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ ಅವರು ವೈದ್ಯರು ಏನಾದರೂ ಹೇಳಿದ್ದಾರಾ? ವಾಕಿಂಗ್ ಮಾಡಿ ಎಂದು ಹಾಗಾಗಿ ಪಾದಯಾತ್ರೆ ಮಾಡುತ್ತೀರಬೇಕು ಎಂದು ವ್ಯಂಗ್ಯವಾಡಿದರು.
ನೀವು ತಲೆಕೇಳಗಾದರೂ ಸಮಸ್ಯೆ ಬಗೆಹರಿಸಲ್ಲಾ ನಾವು ಬಗೆಹರಿಸುತ್ತೇವೆ. ಎಲೆಚುಕ್ಕೆ ರೋಗದ ನಿವಾರಣೆಗೆ ಸರ್ಕಾರ ಔಷಧ ನೀಡುತ್ತಿದೆ. ಅಡಕೆ ಬೆಳೆಗಾರರು ಇಂದು ಸಂಕಷ್ಟ ದಲ್ಲಿದ್ದಾರೆ. ಕೇಂದ್ರದಿಂದ ವಿಜ್ಞಾನಿಗಳ ತಂಡ ಬಂದು ಎಲೆ ಚುಕ್ಕೆ ರೋಗದ ಕುರಿತು ಸಂಶೋದನೆ ಮಾಡಲಿದ್ದಾರೆ ಎಂದರು.
ಇಷ್ಟು ವರ್ಷ ಏನು ಮಾಡಿದಿರಿ ರಾಘವೇಂದ್ರ ಪ್ರಶ್ನೆ: ನಂತರ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ, ಶರಾವತಿ ಸಂತ್ರಸ್ತರ ಕೂಗನ್ನು ಇಲ್ಲಿಯವರೆಗೆ ರಾಜಕೀಯ ಮಾಡಿಕೊಂಡು ಬಂದಿದ್ದು ಕಾಂಗ್ರೆಸ್, ಸಿದ್ದರಾಮಯ್ಯನವರನ್ನು ವಿರೋಧ ಪಕ್ಷದ ನಾಯಕರಿಗೆ ಮೂರು ಪ್ರಶ್ನೆ ಕೇಳುತ್ತೇನೆ. ಅರಣ್ಯ ಸಂರಕ್ಷಣಾ ಕಾಯ್ದೆ ಬರುವ ಮುಂಚೆ ಈ ಸಮಸ್ಯೆಯನ್ನು ಬಗೆಹರಿಸುವ ಅವಕಾಶ ದೇಶ ಆಳಿದ ಕಾಂಗ್ರೆಸ್ಗಿತ್ತು ಯಾಕೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲಿಲ್ಲಾ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಡಿ ನೋಟಿಪಿಕೇಷನ್ ಪರಿಹರಿಸಲು ಪುನರ್ ಗಮನ ನೀಡುತ್ತಿದೆ. ಎಪ್ಪತ್ತು ವರ್ಷ ಆಡಳಿತ ಮಾಡಿ ಕಾಂಗ್ರೆಸ್ ಯಾಕೆ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲ್ಲಿಲ್ಲಾ ಈ ಸಮಸ್ಯೆ ಯನ್ನು ನಮ್ಮ ಸರ್ಕಾರ ನೂರಕ್ಕೆ ನೂರು ಬಗೆಹರಿಸುತ್ತದೆ.
ಚುನಾವಣೆ ಇದ್ದಾಗ ಮಾತ್ರ ಕಾಂಗ್ರೆಸ್ ನವರಿಗೆ ಕಾಟಾಚಾರಕ್ಕೆ ಸಮಸ್ಯೆ ನೆನಪಾಗುತ್ತೆ. ಕಾಂಗ್ರೆಸ್ ನವರು ಮಾಡುತ್ತಿರುವ ಪಾದಯಾತ್ರೆಯ ಸಭೆಯಲ್ಲಿ ಕೈ ಮುಗಿದು ಸಂತ್ರಸ್ತರ ಕ್ಷೇಮೆಯನ್ನು ಕಾಂಗ್ರೆಸ್ ಕೇಳಬೇಕು ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್,ಮಾಜಿ ಶಾಸಕ ಸ್ವಾಮಿರಾವ್,ಶಾಸಕರಾದ ಹರತಾಳು ಹಾಲಪ್ಪ,ಅಶೋಕ್ ನಾಯ್ಕ,ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ರೈತ ಮೊರ್ಚಾದ ಜಿಲ್ಲಾಧ್ಯಕ್ಷ ರಾಮಚಂದ್ರ, ಸೇರಿದಂತೆ ಶರಾವತಿ ಸಂತ್ರಸ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ: ಶೀಘ್ರವೇ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲಾಗುವುದು: ಸಂಸದ ಬಿ ವೈ ರಾಘವೇಂದ್ರ