ಶಿವಮೊಗ್ಗ: ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ ಸೇವನೆಯಿಂದ ಮಧುಮೇಹ ನಿಯಂತ್ರಣ ಸಾಧ್ಯವೆಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಹೇಳಿದರು.
ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅತಿಯಾದ ತೂಕ, ಚಟುವಟಿಕೆ ರಹಿತ ಜೀವನಶೈಲಿ, ಹೆಚ್ಚಿನ ಕೊಬ್ಬಿನ ಅಂಶ ಹೊಂದಿರುವುದು, ಅತಿಯಾದ ಧೂಮಪಾನ, ಮದ್ಯಪಾನ, ಅನುವಂಶೀಯತೆ, ಅನಾರೋಗ್ಯಕರ ಆಹಾರ ಸೇವನೆ, ಅತಿಯಾದ ಉಪ್ಪು ಬಳಕೆ ಮತ್ತು ಎಣ್ಣೆಯಿಂದ ಮಾಡಿದ ಖಾದ್ಯಗಳ ಸೇವನೆ ಮಧುಮೇಹಕ್ಕೆ ಕಾರಣಗಳಾಗಿವೆ ಎಂದರು.
ದೇಶದಲ್ಲಿ ಮಧುಮೇಹ ಕಾಯಿಲೆಯಿಂದ 62 ಮಿಲಿಯನ್ ಜನರು ಬಳಲುತ್ತಿದ್ದು, ಪ್ರತಿ ವರ್ಷ ಒಂದು ಮಿಲಿಯನ್‍ಗಿಂತ ಹೆಚ್ಚಿನ ಜನ ಈ ಕಾಯಿಲೆಯಿಂದ ಮರಣ ಹೊಂದುತ್ತಿದ್ದಾರೆ ಎಂದರು. ಒಂದು ಅಂದಾಜಿನ ಪ್ರಕಾರ 2030ರ ವೇಳೆಗೆ 98 ಮಿಲಿಯನ್ ಭಾರತೀಯರು ಮಧುಮೇಹದಿಂದ ಬಳಲಬಹುದು ಎಂದು ಅಂದಾಜಿಸಲಾಗಿದೆ. ಸದ್ಯದಲ್ಲಿ ಭಾರತ ದೇಶವು ವಿಶ್ವದಲ್ಲಿಯೇ ಸಕ್ಕರೆ ಕಾಯಿಲೆಯ ರಾಜಧಾನಿಯಾಗಲಿದೆ ಎಂದರು. ದೇಶದ ಗ್ರಾಮೀಣ ಭಾಗದ ಜನರಲ್ಲಿ ಶೇ. 5 - 6ರಷ್ಟು ಹಾಗೂ ನಗರಪ್ರದೇಶದಲ್ಲಿ ಶೇ. 10-12ರಷ್ಟು ಜನ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಮಧುಮೇಹ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಗುತ್ತಿದೆ. ತಪಾಸಣೆ ಮಾಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದರು. ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಿಲ್ಲದ ಸೇವೆಗಳಿಗೆ ಎ.ಬಿ.ಆರ್.ಕೆ. ಕಾರ್ಯಕ್ರಮದಡಿಯಲ್ಲಿ ನೋಂದಾಯಿತ ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಚಿಕಿತ್ಸೆ ನೀಡಲಾಗುವುದು. ಅಲ್ಲದೆ ಆರೋಗ್ಯ ಇಲಾಖೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮಧುಮೇಹ ಕಾಯಿಲೆ ಕುರಿತು ಜನಜಾಗೃತಿ ಹಾಗೂ ಆರೋಗ್ಯ ಶಿಕ್ಷಣದ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಇನ್ನು ಸಭೆಯಲ್ಲಿ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ನಾಗರಾಜ್ ನಾಯ್ಕ್, ಜಿಲ್ಲಾ ಎನ್.ಸಿ.ಡಿ.ಘಟಕದ ಕಾರ್ಯಕ್ರಮಾಧಿಕಾರಿ ಡಾ. ಶಂಕರಪ್ಪ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಪರಮೇಶ್ವರ್ ಇದ್ದರು.