ಶಿವಮೊಗ್ಗ: ಆಧುನಿಕ ಯುಗದ ವೇಗಕ್ಕೆ ಪೂರಕವಾಗಿ ಬೆಳೆಯುತ್ತಿರುವ ನಗರದಲ್ಲಿ ಸಮಸ್ಯೆಗಳು ಅನೇಕ. ಅವುಗಳಲ್ಲಿ ಬಹುಮುಖ್ಯವಾಗಿ ಉತ್ಪತ್ತಿಯಾಗುವ ತ್ಯಾಜ್ಯಗಳ ಸಮರ್ಪಕ ವಿಲೇವಾರಿ ಮತ್ತು ನಿಯಂತ್ರಣಕ್ಕೆ ಕ್ರಮ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪೌರಾಯುಕ್ತರು, ಪರಿಸರ ಅಭಿಯಂತರು ಹಾಗೂ ಆರೋಗ್ಯ ಅಧೀಕ್ಷಕರಿಗಾಗಿ ಏರ್ಪಡಿಸಲಾಗಿದ್ದ ಘನತ್ಯಾಜ್ಯ ಸಮರ್ಪಕ ವಿಲೇವಾರಿ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿದಿನ ಶೇ.50ರಷ್ಟು ಹಸಿಕಸ ಸೇರಿದಂತೆ ನೂರಾರು ಟನ್ ಕಸ ಸಂಗ್ರಹಿಸಲಾಗುತ್ತಿದೆ. ಈ ಕಸವನ್ನು ಮೂಲದಲ್ಲಿಯೇ ಹಸಿ ಕಸ ಮತ್ತು ಒಣಕಸವನ್ನಾಗಿ ವಿಭಜಿಸಿ, ವೈಜ್ಞಾನಿಕವಾಗಿ ನಿರ್ವಹಿಸಬೇಕಾದ ಅಗತ್ಯವಿದೆ. ಸ್ವಚ್ಚ ಸುಂದರ ನಗರ ನಿರ್ಮಾಣ ಹಾಗೂ ಕಸದ ನಿಯಂತ್ರಣ ಕುರಿತು ಜನರಲ್ಲಿ ಅರಿವು ಮೂಡಿಸಲು ಪಾಲಿಕೆಯು ಕೈಗೊಂಡಿರುವ ಈ ಮಹತ್ವದ ಕಾರ್ಯಕ್ಕೆ ಪೂರಕವಾಗಿ ಸಾರ್ವಜನಿಕರೂ ಕೂಡ ಸಹಕರಿಸಬೇಕಾದ ಅಗತ್ಯವಿದೆ. ಉತ್ಪಾದನೆಯಾಗುವ ಕಸವನ್ನು ಕಡಿಮೆ ಮಾಡಲು ಅಳವಡಿಸಿಕೊಳ್ಳಬಹುದಾದ ಸುಲಭ, ಸರಳ ವಿಧಾನಗಳ ಬಗ್ಗೆ ತಜ್ಞರಿಂದ ಮಾಹಿತಿ ಪಡೆಯಲು ಇದು ಸಕಾಲವಾಗಿದೆ ಎಂದರು.
ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಟಿ.ಎಸ್.ಮಹದೇವಸ್ವಾಮಿ, ರಮೇಶ್, ಡಾ,ಡಿ.ಆರ್.ರವಿ, ಬಿ.ಬಸವರಾಜು ಪಾಲ್ಗೊಂಡಿದ್ದರು.