ಶಿವಮೊಗ್ಗ: ವಿಶ್ವವಿಖ್ಯಾತ ಜೋಗ ಜಲಪಾತವು ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದಂತೆಯೇ ಜನರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಮಳೆರಾಯನ ಆಗಮನವಾಗುತ್ತಿದ್ದಂತೆಯೇ ಜೋಗದಲ್ಲಿ ಶರಾವತಿ ನದಿಯು ಧುಮ್ಮಿಕ್ಕಿ ಹರಿಯುತ್ತಿದೆ.
ಹೊಸನಗರದಲ್ಲಿ ಹುಟ್ಟುವ ಶರಾವತಿ ನದಿಯು ಜೋಗದಲ್ಲಿ ಹರಿಯುವ ವೈಭವ ಕಣ್ತುಂಬಿಕೊಳ್ಳುವುದೇ ಚೆಂದ. ಇದು ಹೀಗೆ ಮುಂದೆ ಅರಬ್ಬಿ ಸಮುದ್ರ ಸೇರುತ್ತದೆ. 930 ಅಡಿ ಎತ್ತರದಿಂದ ಹಾಲ್ನೊರೆಯಂತೆ ಹರಿಯುವುದು ಮನಮೋಹಕವಾಗಿರುತ್ತದೆ. ರಾಜ, ರಾಣಿ, ರೋರರ್, ರಾಕೆಟ್ ಆಗಿ ಹರಿಯುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.
ಈ ವೈಭವ ವೀಕ್ಷಿಸಲು ಪ್ರವಾಸಿಗರು ಜೋಗಕ್ಕೆ ತಂಡೋಪತಂಡವಾಗಿ ಹರಿದು ಬರುತ್ತಿದ್ದಾರೆ. ಜೋಗದಲ್ಲಿನ ಮಳೆ, ಮಂಜಿನ ಆಟ ನೋಡುವವರನ್ನು ಪುಳಕಿತರನ್ನಾಗಿಸುತ್ತದೆ. ಮಳೆ ಅಥವಾ ಜೋರಾಗಿ ಗಾಳಿ ಬೀಸಿದಾಗ ಜಲಪಾತದ ದೃಶ್ಯಗಳು ಸ್ಪಷ್ಟವಾಗಿ ಗೋಚರಿಸುತ್ತವೆ.
ಪ್ರವಾಸಿಗರು ಜೋಗದ ಮುಂದೆ ನಿಂತು, ತಮ್ಮ ಪ್ರೀತಿಪಾತ್ರರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವುದು ಸಾಮಾನ್ಯ. ಮೊದಲ ಬಾರಿಗೆ ಬಂದವರನ್ನು ಬೆಕ್ಕಸ ಬೆರಗಾಗಿ ನೋಡುವಂತೆ ಮಾಡಿತು.
ಕಡುಗಪ್ಪಿನ, ಹಸಿರ ರಾಶಿಯ ಮಧ್ಯೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲರಾಶಿ ನೋಡಿ ಎಲ್ಲರೂ ಒಮ್ಮೆ ವಾವ್ ಅನ್ನಲೇ ಬೇಕು, ಅಷ್ಟು ಸುಂದರವಾಗಿ ಕಾಣುತ್ತದೆ ಜೋಗದ ವೈಭವ. ಒಮ್ಮೆ ಜೋಗಕ್ಕೆ ಬಂದವರು, ಪ್ರತಿ ಮಳೆಗಾಲದಲ್ಲಿ ತಪ್ಪದೇ ಬರುತ್ತಾರೆ. ಅದಕ್ಕೆ ಅಣ್ಣಾವ್ರು, ಇರೊದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ ಅಂತ ಹಾಡಿದ್ದಾರೆ.
ಮಳೆಗಾಲದಲ್ಲಿ ಜೋಗದ ಕೆಳಗಿನ ಗುಂಡಿಗೆ ಇಳಿಯುವುದನ್ನು ನಿಷೇಧಿಸಲಾಗಿದೆ. ಜೋಗದಲ್ಲಿ ಪ್ರವಾಸಿಗರಿಗೆ ಇನ್ನಷ್ಟು ಸೌಲಭ್ಯಗಳನ್ನು ಜೋಗ ಪ್ರಾಧಿಕಾರ ಕಲ್ಪಿಸಬೇಕಿದೆ. ಮನೋಜ್ಞ ನೋಟ ಹೊಂದಿರುವ ಜೋಗಕ್ಕೆ ನೀವೂ ಒಮ್ಮೆ ಭೇಟಿ ನೀಡಿ.