ಶಿವಮೊಗ್ಗ: ಕೊಟ್ಟ ಸಾಲದ ಹಣ ಮರಳಿಸುವಂತೆ ಕೇಳಿದ್ದಕ್ಕೆ ಸಾಲ ಪಡೆದವರು ಅಕ್ರಮ ಸಂಬಂಧದ ಪಟ್ಟ ಕಟ್ಟಿದ್ದರು. ಇದರಿಂದ ಮನನೊಂದ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಭದ್ರಾವತಿಯ ಹಂಚಿನ ಸಿದ್ದಾಪುರದಲ್ಲಿ ನಡೆದಿದೆ.
ಭದ್ರಾವತಿ ತಾಲೂಕಿನ ಯಡೇಹಳ್ಳಿಯ ನಿವಾಸಿ ವೀಣಾ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡವರು. ವೀಣಾ ಹಾಗೂ ಸಂತೋಷ್ ದಂಪತಿಯು ಭದ್ರಾವತಿ ತಾಲೂಕಿನ ಅರಹತೋಳಲು ಗ್ರಾಮದ ಸಂತೋಷ ಹಾಗೂ ಆಶಾ ಎಂಬುವರಿಗೆ 8 ಲಕ್ಷ ರೂ. ಸಾಲ ನೀಡಿದ್ದರು. ಈ ಸಾಲ ವಾಪಸ್ ನೀಡುವಂತೆ ಕೇಳಿದ್ದಕ್ಕೆ ಆಶಾ ಹಾಗೂ ಸಂತೋಷ್ ದಂಪತಿಯು ವೀಣಾ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಅಪಪ್ರಚಾರ ನಡೆಸಿದ್ದಾರೆ ಎನ್ನಲಾಗ್ತಿದೆ.
ಹೀಗೆ ಅಪಪ್ರಚಾರ ಮಾಡದಂತೆ ಕೇಳಿಕೊಂಡರೂ ಆಶಾ ದಂಪತಿ ಅದನ್ನೇ ಮುಂದುವರೆಸಿದ್ದಾರೆ. ಇದರಿಂದ ಬೇಸತ್ತ ವೀಣಾ 7 ವರ್ಷದ ಮಗಳಾದ ಜ್ಞಾನವಿ ಹಾಗೂ ಒಂದು ವರ್ಷದ ದೈವಿಕಾ ಎಂಬ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಹಂಚಿನ ಸಿದ್ದಾಪುರ ಗ್ರಾಮದ ಬಳಿಯ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ವೀಣಾ ಮೊನ್ನೆ ಜ.13ರಂದು ತಾನು ಮಕ್ಕಳೊಂದಿಗೆ ತವರು ಮನೆಯಾದ ಹೊಳಲ್ಕೆರೆಗೆ ಹೋಗುವುದಾಗಿ ಹೇಳಿ ಹೊರಟಿದ್ದರು. ಆದರೆ ಊರಿನ ಬಳಿ ಬಸ್ ಹತ್ತಿಕೊಂಡು ಅಲ್ಲಿಂದ ಎರಡು ಕಿ.ಮೀ ದೂರವಿರುವ ನಾಲೆ ಬಳಿ ಇಳಿದು ಅದಕ್ಕೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ವೀಣಾ ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ನಾಲೆಯ ದಡದ ಮೇಲೆಯೇ ಬ್ಯಾಗ್ ಇಟ್ಟಿದ್ದಾರೆ. ವೀಣಾ ಮೃತದೇಹವು ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಬಳಿ ಹಾಗೂ ಜ್ಞಾನವಿ ಮೃತದೇಹ ಚನ್ನಗಿರಿ ತಾಲೂಕಿನ ನಲ್ಲೂರು ಸಮೀಪ ಪತ್ತೆಯಾಗಿದ್ದು, ದೈವಿಕಾಳ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.
ಈ ಕುರಿತು ಮೃತ ವೀಣಾ ಪತಿ ಸಂತೋಷ್ ನೀಡಿದ ದೂರಿನ ಮೇರೆಗೆ ಅರಹತೋಳಲು ಗ್ರಾಮದ ಸಂತೋಷ್(35) ನನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ. ಆದರೆ ಆಶಾ ಪರಾರಿಯಾಗಿದ್ದಾಳೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಕೊಲೆ ಬೆದರಿಕೆ ಹಾಕಿ ನಿರಂತರ ಅತ್ಯಾಚಾರ.. ಹೆಣ್ಣು ಮಗುವಿಗೆ ಜನ್ಮಕೊಟ್ಟ 10ನೇ ಕ್ಲಾಸ್ ಬಾಲಕಿ..