ಶಿವಮೊಗ್ಗ: ಚಿಕ್ಕಮಗಳೂರಿನ ಆಲ್ದೂರಿನಲ್ಲಿ ಸೆರೆ ಹಿಡಿದ ಕಾಡಾನೆಯನ್ನು ಸಕ್ರೆಬೈಲಿನ ಆನೆ ಬಿಡಾರಕ್ಕೆ ತರಲಾಗಿದೆ. ಆಲ್ದೂರು ಭಾಗದಲ್ಲಿ ಬೆಳೆ ಹಾನಿ ಸೇರಿದಂತೆ ಮಾನವರ ಜೀವಕ್ಕೆ ಹಾನಿ ಉಂಟುಮಾಡಿದ ಕಾಡಾನೆಯನ್ನು ಸೆರೆ ಹಿಡಿಯುವ ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿಯಾಗಿದೆ.
ಈ ಕಾಡಾನೆಗೆ ಸುಮಾರು 40 ವರ್ಷ ವಯಸ್ಸಾಗಿದ್ದು, ಬಲಶಾಲಿಯಾಗಿದೆ. ಆನೆ ಸೆರೆ ಹಿಡಿದು ಕೊರಳಿಗೆ ರೇಡಿಯೋ ಕಾಲರ್ ಅಳವಡಿಸಿ, ಮರಳಿ ಕಾಡಿಗೆ ಬಿಡುವ ಯೋಜನೆಯಲ್ಲಿದ್ದ ಅರಣ್ಯ ಇಲಾಖೆಯು ತನ್ನ ಯೋಜನೆ ಬದಲಿಸಿದೆ. ಕಾಡಾನೆಯನ್ನು ಪಳಗಿಸುವ ಯೋಚನೆಗೆ ಬಂದಿದ್ದು, ಇದಕ್ಕಾಗಿ ಆನೆಯನ್ನು ಸಕ್ರೆಬೈಲು ಬಿಡಾರಕ್ಕೆ ತಂದು ಬಿಡಲಾಗಿದೆ.
ಕ್ರಾಲ್ ಸೇರಿದ ದೈತ್ಯ ಕಾಡಾನೆ: ಸಕ್ರೆಬೈಲಿನ ವೈದ್ಯ ವಿನಯ್ ವನ್ಯಜೀವಿಗಳನ್ನು ಸೆರೆ ಹಿಡಿಯುವ ಕೆಲಸದಲ್ಲಿ ನಿಪುಣರಾಗಿದ್ದಾರೆ. ಪ್ರಸ್ತುತ ಸೆರೆ ಹಿಡಿದಿರುವ ಕಾಡಾನೆಗೆ ಅರಿವಳಿಕೆ ಮದ್ದು ನೀಡಿ, ಕೇಜ್ ಮಾಡಿಕೊಂಡು ಚಿಕ್ಕಮಗಳೂರು ಜಿಲ್ಲೆಯಿಂದ ಲಾರಿಯಲ್ಲಿ ಸಾಗಿಸಲಾಯಿತು. ಈ ಆನೆಯು ಮತ್ತಿನಲ್ಲಿಯೇ ಇತ್ತು. ಅಳವಡಿಸಲಾಗಿದ್ದ ರೇಡಿಯೋ ಕಾಲರ್ ತೆಗೆದು, ಕ್ರೇನ್ ಮೂಲಕ ಮಧ್ಯರಾತ್ರಿ ಸಾಗಿಸಲಾಯಿತು.
ಈ ವೇಳೆ ಸಾಗರ್ಣ ಬಹದ್ದೂರ್, ಬಾಲಣ್ಣ ಸೇರಿದಂತೆ ಇತರೆ ಆನೆಗಳು ಸಹಾಯ ಮಾಡಿದವು. ಕಾಡಾನೆಯನ್ನು ತಿಂಗಳುಗಳ ಕಾಲ ಪಳಗಿಸಿ, ಸಕ್ರೆಬೈಲು ಆನೆಗಳ ಗುಂಪಿಗೆ ಸೇರಿಸಲಾಗುತ್ತದೆ. ಡಾ.ವಿನಯ್ ಹಾಗೂ ಸಕ್ರೆಬೈಲಿನ ಎಸಿಎಫ್ ನೇತೃತ್ವದಲ್ಲಿ ಆನೆಯನ್ನು ಕ್ರಾಲ್ಗೆ ತಂದು ಬಿಡಲಾಯಿತು.
ಆಲ್ದೂರಿನಲ್ಲಿ ಇಬ್ಬರನ್ನು ಕೊಂದ ಕಾಡಾನೆ ಸೆರೆ ಹಾಗೂ ಉಳಿದ ಆನೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಮುಂದುವರೆಯಲಿದೆ. ಈ ಭಾಗದ ರೈತರ ಬೆಳೆ ಹಾನಿಯನ್ನು ಕಾಡಾನೆಗಳು ಮಾಡುತ್ತಿದ್ದು, ರೈತರು ತಮ್ಮ ಜಮೀನುಗಳಿಗೆ ತೆರಳಲು ಭಯಪಡುವಂತಾಗಿದೆ. ಅಲ್ಲದೇ ಕೆಲಸಗಾರರು ಸಿಗದೆ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮಹಿಳೆಯೊಬ್ಬರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರು.
ಪ್ರತ್ಯೇಕ ಕಾರ್ಯಾಚರಣೆ: ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಸನಿ ಎಂಬ ಪ್ರದೇಶದಲ್ಲಿ ನಿನ್ನೆ (ಶುಕ್ರವಾರ) ಕಾಡಾನೆಯೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ. ಅರಿವಳಿಕೆ ನೀಡಿದ ಬಳಿಕ ಸುಮಾರು 8 ಕಿ.ಮೀನಷ್ಟು ದೂರ ಸಾಗಿದ ಒಂಟಿ ಸಲಗ ಸಾರಗೋಡು ಬಳಿಯಿರುವ ಅರಣ್ಯದಲ್ಲಿ ಪ್ರಜ್ಞೆತಪ್ಪಿ ಬಿದ್ದಿತ್ತು. ಅಭಿಮನ್ಯು ನೇತೃತ್ವದ ಸಾಕಾನೆಗಳ ಸಹಾಯದಿಂದ ಸೆರೆಯಾದ ಕಾಡಾನೆಯನ್ನು ಲಾರಿಗೆ ಹತ್ತಿಸಿ ಸಕ್ರೇಬೈಲ್ ಆನೆ ಶಿಬಿರದತ್ತ ಕರೆದುಕೊಂಡು ಬರಲಾಗಿತ್ತು.
ಇದನ್ನೂ ಓದಿ: ಚಿಕ್ಕಮಗಳೂರು: ಕಬ್ಬಿನ ಗದ್ದೆಯಲ್ಲಿ ಆನೆಗಳು; ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ