ಶಿವಮೊಗ್ಗ : ನಾಲ್ಕು ವರ್ಷ ಪ್ರೀತಿಸಿ ನಂತರ ಮನೆಯವರ ವಿರೋಧದ ನಡುವೆ ಮದುವೆಯಾದ ಜೋಡಿಯೊಂದು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ನನ್ನ ಗಂಡ ನನಗೆ ವರದಕ್ಷಿಣೆ ಬೇಕು ಎಂದು ಪೀಡಿಸುತ್ತಿದ್ದಾನೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಂಜು ಹಾಗೂ ಚೇತನ್ ಎಂಬಿಬ್ಬರು ಕಳೆದ ನಾಲ್ಕು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಎರಡು ವರ್ಷದ ಹಿಂದೆ ಮದುವೆ ಕೂಡ ಆಗಿದ್ದರು.
ಅಂಜು ದಾವಣಗೆರೆ ಜಿಲ್ಲೆ ಕಾರಿಗನೂರು ಗ್ರಾಮದ ನಿವಾಸಿ, ಚೇತನ್ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಸೀತರಾಮಪುರ ಗ್ರಾಮದವನು. ಅಂಜು ತನ್ನ ಅಜ್ಜಿ ಮನೆಯಾದ ಸೀತರಾಮಪುರಕ್ಕೆ ಬಂದಾಗ ಚೇತನ್ ಜೊತೆ ಪ್ರೇಮಾಂಕುರವಾಗಿತ್ತಂತೆ. ಇಬ್ಬರು ಮನೆಯವರಿಗೆ ತಿಳಿಸದೆ ದಾವಣಗೆರೆಯ ವಿವಾಹ ನೊಂದಣಿ ಕಚೇರಿಯಲ್ಲಿ 2021ರಲ್ಲಿ ಮದುವೆಯಾಗಿದ್ದರು.
ಮದುವೆಯಾದ ಮೇಲೆ ಚೇತನ್ ತಾನು ಲ್ಯಾನ್ ಟೆಕ್ನಿಷಿಯನ್ ಆಗಿದ್ದು, ಬೆಂಗಳೂರಿಗೆ ಹೋಗಿ ಅಲ್ಲಿ ಸೆಟ್ಲ್ ಆದ ನಂತರ ನಿನ್ನನ್ನು ಕರೆಯಿಸಿಕೊಳ್ಳುತ್ತೇನೆ ಎಂದು ಹೇಳಿ ಹೋಗಿದ್ದನಂತೆ. ನಂತರ ಮದುವೆ ವಿಚಾರ ಚೇತನ್ ಮನೆಯಲ್ಲಿ ತಿಳಿದಿತ್ತು. ಚೇತನ್ ತನ್ನ ಕುಟುಂಬದೂಂದಿಗೆ ಅಂಜು ಮನೆಗೆ ಹೋಗಿ ಮದುವೆ ಮಾತುಕತೆ ನಡೆಸಿದ್ದರು.
ಆದರೆ, ಇಬ್ಬರದು ಬೇರೆ ಬೇರೆ ಜಾತಿಯಾದ ಕಾರಣ, ಚೇತನ್ ಮನೆಯವರು ವರದಕ್ಷಿಣೆ ನೀಡುವಂತೆ ಬೇಡಿಕೆ ಇಟ್ಟಿದ್ದರಂತೆ. ₹2 ಲಕ್ಷ ಹಣ, 10 ಗ್ರಾಂ ಬಂಗಾರ ಕೊಡುವಂತೆ, ಚೇತನ್ ಮನೆಯವರು ಕಿರುಕುಳ ನೀಡಿದ್ದರಂತೆ. ಈ ಕುರಿತು ಗ್ರಾಮದಲ್ಲಿ ಪಂಚಾಯ್ತಿ ಕೂಡ ನಡೆದಿತ್ತಂತೆ. ನಾನು ತವರು ಮನೆಯಲ್ಲಿಯೇ ಇದ್ದು, ನನ್ನನ್ನು ನನ್ನ ಗಂಡ ಮನೆಗೆ ಕರೆದು ಕೊಂಡು ಹೋಗದೆ, ತನಗೆ ವರದಕ್ಷಿಣೆ ತರುವಂತೆ ದಿನವು ಫೋನ್ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದಾನೆ ಎಂದು ಆರೋಪಿಸಿರುವ ಯುವತಿ, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಚೇತನ್ ವಿರುದ್ಧ ದೂರು ನೀಡಿದ್ದಾರೆ.