ಶಿವಮೊಗ್ಗ: ಸರ್ಕಾರದ ಪ್ರಮುಖ ಭಾಗವಾಗಿರುವ ಸರ್ಕಾರಿ ನೌಕರರ ಸೇವೆ ಜನಸಾಮಾನ್ಯರಿಗೆ ಅತ್ಯಂತ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಸರ್ಕಾರಿ ನೌಕರರೂ ಸಹ ಅತ್ಯಂತ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ನಾಡು ಕಟ್ಟುವ ಕೆಲಸ ಮಾಡಬೇಕಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಕರೆ ನೀಡಿದ್ದಾರೆ.
ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘ, ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ, ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘಗಳ ವಾರ್ಷಿಕ ಮಹಾಸಭೆ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಂತಹ ಕಾರ್ಯವನ್ನು ನೌಕರ ವರ್ಗದವರು ಅತ್ಯಂತ ಶ್ರಮ ವಹಿಸಿ ಮಾಡುತ್ತಿರುವುದರಿಂದ ಯೋಜನೆಗಳು ಯಶಸ್ವಿಯಾಗಲು ಕಾರಣವಾಗಿದೆ. ಈ ಹಿನ್ನೆಲೆ, ನೌಕರ ಸಮೂಹವನ್ನು ಅಭಿನಂದಿಸುತ್ತೇನೆ ಎಂದು ಶ್ಲಾಘಿಸಿದರು.
ವಿಷಮ ಪರಿಸ್ಥಿತಿಯಲ್ಲಿಯೂ ನೌಕರ ವರ್ಗದವರು ಹಗಲು, ರಾತ್ರಿ ಎನ್ನದೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್‌ನಂತಹ ಸಂಕಷ್ಟ ಸಂದರ್ಭದಲ್ಲಿ ನೌಕರ ವರ್ಗ ಸಲ್ಲಿಸಿದ ಸೇವೆಯಿಂದಾಗಿಯೇ ಕೊರೊನಾ ಮಹಾಮಾರಿಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿದೆ. ನೈಸರ್ಗಿಕ ವಿಕೋಪದ ಪರಿಸ್ಥಿತಿಯನ್ನೂ ಸಹ ಸರಿದಾರಿಗೆ ತರುವ ನಿಟ್ಟಿನಲ್ಲಿ ನೌಕರರ ವರ್ಗ ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿಮ್ಮ ಬೇಡಿಕೆಗಳು ಏನೇ ಇದ್ದರೂ ಸಹ ಅವುಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಪ್ರತಿಭಟನೆಯ ಹಾದಿಯನ್ನು ತುಳಿಯಬೇಡಿ. ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಅವುಗಳ ಈಡೇರಿಕೆಗೆ ಪ್ರಯತ್ನಿಸಿ. ಸರ್ಕಾರ ಎಂದೆಂದಿಗೂ ನಿಮ್ಮೊಂದಿಗೆ ಇರುತ್ತದೆ. ನಮ್ಮ ಸರ್ಕಾರ ಇರುವವರೆಗೂ ನೀವು ನಿಮ್ಮ ಬೇಡಿಕೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು, ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗೇಗೌಡ, ನೌಕರರ ಸಂಘದ ಜಿಲ್ಲಾ ಪ್ರಮುಖರಾದ ಮೋಹನ್‌ಕುಮಾರ್, ಮಾರುತಿ ಮೊದಲಾದವರಿದ್ದರು.