ಶಿವಮೊಗ್ಗ : ಇಂದಿನಿಂದ ಒಂದು ತಿಂಗಳ ಕಾಲ ಮತದಾರರ ಪರಿಷ್ಕರಣಾ ಕಾರ್ಯ ನಡೆಯಲಿದೆ. ಈ ವೇಳೆ ಬಿಎಲ್ಓ ಗಳು ಪ್ರತಿ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಪರ ಜಿಲ್ಲಾಧಿಕಾರಿ ಅನುರಾಧ, ಬಿಎಲ್ಓಗಳು ಪ್ರತಿ ಮನೆಗೆ ಭೇಟಿ ನೀಡಿ ಮತದಾರರು ನೀಡುವ ದಾಖಲೆಗಳೊಂದಿಗೆ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಪರಿಶೀಲಿಸಲಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಗಾಗಿಯೇ ಚುನಾವಣಾ ಆಯೋಗ ಹೊಸದೊಂದು ಆ್ಯಪ್ ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು.
ಈ ಆ್ಯಪ್ ಜಿಪಿಎಸ್ ಆಧಾರಿತವಾಗಿರುತ್ತದೆ. ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ನೊಂದಾಯಿಸುವ ಅರ್ಜಿ ನಮೂನೆ-06 ರಲ್ಲಿ ಬೇರೆ ಕಡೆ ಹೋಗಿರುವ ಮತದಾರರ ಹೆಸರು ತೆಗೆದು ಹಾಕಲು ನಮೂನೆ -07, ತಿದ್ದುಪಡಿಗಾಗಿ ನಮೂನೆ-08 ರಲ್ಲಿ ಮಾಹಿತಿ ಪಡೆಯುತ್ತಾರೆ. ಮನೆಯ ಎಲ್ಲಾ ಸದಸ್ಯರ ಹೆಸರು ಒಂದೇ ಮತಗಟ್ಟೆ ವ್ಯಾಪ್ತಿಯಲ್ಲಿ ಬರುವಂತೆ ಖಾತ್ರಿ ಪಡಿಸಲಾಗುವುದು. ಹೆಚ್ಚುವರಿ ಮತಗಟ್ಟೆ ಸ್ಥಾಪಿಸುವ ಕುರಿತು ಮಾಹಿತಿ ಸಂಗ್ರಹಿಸಲಾಗುವುದು. ಜನವರಿ 1, 2020ಕ್ಕೆ ಅನ್ವಯವಾಗುವಂತೆ ಜನವರಿ 1, 2002ರ ಪೂರ್ವದಲ್ಲಿ ಜನಿಸಿದವರ ಮಾಹಿತಿಯನ್ನು ಸಂಗ್ರಹಿಸಿ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಮತದಾರರ ಪಟ್ಟಿಯಲ್ಲಿ ಹೆಸರನ್ನು ಎನ್ವಿಎಸ್ ಪೋರ್ಟಲ್ ನಲ್ಲಿ ಪಡೆಯಬಹುದಾಗಿದೆ. ಅಲ್ಲದೆ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಜಿಲ್ಲೆಯಲ್ಲಿನ 364 ಸಿಎಸ್ಸ್ಸಿ ಕೇಂದ್ರಗಳಲ್ಲಿ, ತಹಶೀಲ್ದಾರ್ ಕಚೇರಿಗೆ ದಾಖಲೆಗಳೊಂದಿಗೆ ಭೇಟಿ ನೀಡಬಹುದಾಗಿದೆ. ಮತದಾರ ಪಟ್ಟಿಯ ಬಗ್ಗೆ ಮಾಹಿತಿ ಪಡೆದು ಕೊಳ್ಳಲು 1950 ಗೆ ಕರೆ ಮಾಡಿ ಎಂದರು.
ಪ್ರಸ್ತುತ್ತ ಜಿಲ್ಲೆಯಲ್ಲಿ 1,775 ಮತಗಟ್ಟೆಗಳಿವೆ. ಪುರುಷರು ಮತದಾರರು-7,10,456 ಹಾಗೂ ಮಹಿಳಾ ಮತದಾರರು -7,14,259 ಇದ್ದು, ಒಟ್ಟು-14,24,985 ಮತದಾರರು ಇದ್ದಾರೆ ಎಂದು ತಿಳಿಸಿದರು.