ಶಿವಮೊಗ್ಗ: ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಯ ಶತಮಾನೋತ್ಸವ ಕಾರ್ಯಕ್ರಮವನ್ನು ನವೆಂಬರ್ 4 ಮತ್ತು 5 ರಂದು, ಶತಮಾನೋತ್ಸವ ಸಂಭ್ರಮ ಎಂಬ ಶೀರ್ಷಿಕೆಯಡಿ ನಡೆಸಲಾಗುವುದು ಎಂದು ಶತಮಾನೋತ್ಸವ ಸಂಭ್ರಮ ಸಮಿತಿಯ ಅಧ್ಯಕ್ಷ ನಟ ದೊಡ್ಡಣ್ಣ ತಿಳಿಸಿದ್ದಾರೆ.
ಶಿವಮೊಗ್ಗ ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1923ರಲ್ಲಿ ಭದ್ರಾವತಿಯಲ್ಲಿ ಮೈಸೂರು ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ್ದರು. ನಂತರ ಅದಕ್ಕೆ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಎಂದು ಮರು ನಾಮಕರಣ ಮಾಡಲಾಯಿತು. ಮೈಸೂರು ಅರಸರ ದೂರದೃಷ್ಟಿಯಿಂದ ಸ್ಥಾಪನೆಗೊಂಡ ಕಾರ್ಖಾನೆ ಇದು. ಭದ್ರಾವತಿ ಸಮೀಪದ ಕೆಮ್ಮಣ್ಣು ಗುಂಡಿಯಲ್ಲಿದ್ದ ಅದಿರಿನ ಲಭ್ಯತೆಯನ್ನು ನೋಡಿ ಕಾರ್ಖಾನೆ ಸ್ಥಾಪಿಸಲಾಗಿತ್ತು. ಅಂದು ಸಾವಿರಾರು ಜನಕ್ಕೆ ಉದ್ಯೋಗ ನೀಡಿದ್ದ ಕಾರ್ಖಾನೆ ಈಗ ಶತಮಾನವನ್ನು ಕಂಡಿದೆ ಎಂದು ಹೇಳಿದರು.
ಕಾರ್ಖಾನೆ ನೂರು ವರ್ಷ ಪೂರೈಸಿರುವುದನ್ನು ಸಂಭ್ರಮಾಚರಣೆ ಮಾಡಬೇಕು. ಕಾರ್ಖಾನೆ ಹಳೆಯ ಕಾರ್ಮಿಕರು ಸೇರಿ ಶತಮಾನೋತ್ಸವ ಸಂಭ್ರಮ ಎಂಬ ಕಾರ್ಯಕ್ರಮವನ್ನು ನವೆಂಬರ್ 4, 5ರಂದು ಭದ್ರಾವತಿ ಪಟ್ಟಣದ ವಿಐಎಸ್ಎಲ್ ಮೈದಾನದಲ್ಲಿ ಆಯೋಜಿಸಿದ್ದಾರೆ. ಮೈಸೂರು ಸಂಸ್ಥಾನದ ರಾಜ ಯದುವೀರ ಒಡೆಯರ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಇವರ ಜೊತೆ ಸೂತ್ತೂರು ಮಠದ ಸ್ವಾಮಿಜೀಗಳು, ನಿರ್ಮಲಾನಂದ ಸ್ವಾಮಿಜೀ, ಕೋಡಿಮಠದ ಶ್ರೀಗಳು ಹಾಗೂ ಸಿದ್ಧಗಂಗಾ ಮಠದ ಸಿದ್ಧಲಿಂಗ ಶ್ರೀಗಳು ಆಗಮಿಲಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಜ್ಯೋತಿರಾದಿತ್ಯ ಸಿಂಧ್ಯಾ, ನಾಡಿನ ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಲಿದ್ದಾರೆ.
ನವೆಂಬರ್ 5 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು ಆಗಮಿಸಲಿದ್ದಾರೆ. ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ಅವರನ್ನು ಕರೆಯುವ ಪ್ರಯತ್ನ ನಡೆದಿದೆ. ಅಲ್ಲದೇ ಕಾರ್ಯಕ್ರಮದಲ್ಲಿ ಡಾ. ಮಂಜುನಾಥ್, ಸುಧಾಮೂರ್ತಿ, ಪ್ರಭಾಕರ್ ಕೋರೆ ಹಾಗೂ ಮಾಜಿ ಸಚಿವ ಸುಧಾಕರ್ ಅವರನ್ನು ಸನ್ಮಾನ ಮಾಡಲಾಗುವುದು ಎಂದರು. ಈ ವೇಳೆ ಸಮಿತಿಯ ಎಂ.ವಿ.ರೇವಣ್ಣಸಿದ್ದಯ್ಯ, ಅಮೃತ ಹಾಗೂ ರಂಗಣ್ಣ, ವೇದವ್ಯಾಸ ಹಾಜರಿದ್ದರು.
ಸೆಲ್ಫಿ ಕಾಟ ಇಲ್ಲ ಅಂದ್ರೆ, ಎಲ್ಲಾ ನಟರು ಎಲ್ಲಾ ಹೋರಾಟಕ್ಕೂ ಬರುತ್ತಾರೆ: ಸೆಲ್ಫಿ ಕಾಟ ಇಲ್ಲ ಅಂದ್ರೆ, ನಮ್ಮ ಎಲ್ಲಾ ನಟರು ಎಲ್ಲಾ ಹೋರಾಟಗಳಲ್ಲೂ ಭಾಗಿಯಾಗುತ್ತಾರೆ. ಕಾವೇರಿ ನಮ್ಮ ಜೀವನದಿ, ನಮ್ಮ ತಾಯಿ. ಕಾವೇರಿ ನೀರಿನ ಹಂಚಿಕೆ ಬಗ್ಗೆ 1924ರಲ್ಲಿ ಅಗ್ರಿಮೆಂಟ್ ಮಾಡಲಾಗಿತ್ತು. ಯಾರೋ ದೊಡ್ಡವರು ಹೇಳುತ್ತಿದ್ದರು. ಬ್ರಿಟಿಷರು ಬರೆದಂತಹ ಪೇಪರ್ ಬದಲಾಯಿಸಲು ಆಗಿಲ್ವಾ ಅಂತಾ. ಈ ವಿಷಯಕ್ಕೆ ದೊಡ್ಡವರು ಪ್ರವೇಶ ಮಾಡಬೇಕು ಎಂದರು.
ಜಿ. ಮಾದೇಗೌಡರು ಹೇಳಿದ ಹಾಗೆ ರಕ್ತ ಬೇಕಾದ್ರೆ ಕೊಟ್ಟೆವು, ಕಾವೇರಿ ಕೊಡಲ್ಲ. ಕಾವೇರಿ ನಮ್ಮವಳು, ಕಾವೇರಿಗಾಗಿ ಸದಾ ನಮ್ಮ ಬೆಂಬಲ ಇರುತ್ತದೆ. ಸಿನಿಮಾ ನಟ ಎನ್ನುವ ಅಹಂಕಾರ ನಮಗ್ಯಾರಿಗೂ ಇಲ್ಲ. ಉದ್ದೇಶ ಕರೆಕ್ಟ್ ಆಗಿದ್ದ ಜಾಗದಲ್ಲಿ ದೇವರಾಣೆ ಕುಳಿತುಕೊಳ್ಳುತ್ತೇನೆ. ನಾವೇನು ಕಾವೇರಿ ಕುಡಿಯುತ್ತಿಲ್ವಾ, ನಮ್ಮ ಮಕ್ಕಳು ಕಾವೇರಿ ಕುಡಿಯುತ್ತಿಲ್ವಾ. ಕಾವೇರಿ ನೀರಿಗೆ ನಾವೂ ಕಷ್ಟ ಪಡ್ತಿದ್ದೇವೆ. ಮಳೆ ಆಗಬೇಕಿದೆ, ಮಡಿಕೇರಿಯಲ್ಲಿ ಮಳೆಯಾದರೆ ಕನ್ನಂಬಾಡಿ ತುಂಬುತ್ತದೆ ಎಂದರು.
ಕರವೇ, ರೈತ ಸಂಘ ಪ್ರತಿಭಟನೆ: ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕರೆ ನೀಡಿರುವ ಕರ್ನಾಟಕ ಬಂದ್ಗೆ ಶಿವಮೊಗ್ಗ ಜಿಲ್ಲಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆಯಿಂದಲೇ ಸರ್ಕಾರಿ ಹಾಗೂ ಖಾಸಗಿ ಬಸ್ಗಳ ಸಂಚಾರ ಎಂದಿನಂತೆ ನಡೆಯಿತು. ಕರವೇ (ಪ್ರವೀಣ್ ಶೆಟ್ಟಿ) ಬಣ ಅಶೋಕ ವೃತ್ತದಿಂದ ಟಿ.ಸೀನಪ್ಪ ಶೆಟ್ಟಿ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿತು. ಈ ವೇಳೆ ಕೈ ಮುಗಿದು ಅಂಗಡಿಗಳನ್ನು ಬಂದ್ ಮಾಡಬೇಕೆಂದು ಮನವಿ ಮಾಡುತ್ತಾ ಸಾಗಿದರು. ಟಿ.ಸೀನಪ್ಪ ಶೆಟ್ಟಿ ವೃತ್ತದಲ್ಲಿ ಕರವೇ ಕಾರ್ಯಕರ್ತರು ಸ್ಟಾಲಿನ್ ಫೋಟೊಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶವನ್ನು ಹೊರ ಹಾಕಿದರು. ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಮುಂದೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಕಾವೇರಿ ನೀರು ಬಿಡುಗಡೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಕಾವೇರಿಗಾಗಿ ಸಾಗರದಲ್ಲಿ ಏಕಾಂಗಿ ಪ್ರತಿಭಟನೆ: ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸಬಾರದೆಂದು ವಾಟಾಳ್ ನಾಗರಾಜ್ ಅಭಿಮಾನಿ ಜಮೀಲ್ ಎಂಬುವರು ಸಾಗರದಲ್ಲಿ ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ. ಸಾಗರದ ಜೋಗ ರಸ್ತೆಯಲ್ಲಿ ಏಕಾಂಗಿಯಾಗಿ ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಜಮೀಲ್ ಏಕಾಂಗಿಯಾಗಿ ಸುಮಾರು ಅರ್ಧ ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ನಂತರ ಪೊಲೀಸರು ಮನವೊಲಿಸಿ ಜಮೀಲ್ ಅವರನ್ನು ಪ್ರತಿಭಟನೆ ಕೈ ಬಿಡುವಂತೆ ಮಾಡಿದರು.
ಇದನ್ನೂ ಓದಿ: 'ಕಾವೇರಿ'ದ ಬಂದ್: ಸ್ಯಾಂಡಲ್ವುಡ್ ನಟ-ನಟಿಯರಿಂದ ಪ್ರತಿಭಟನೆ... ಶಿವಣ್ಣ, ಉಪೇಂದ್ರ, ದರ್ಶನ್, ಶ್ರೀನಾಥ್ ಸೇರಿ ಹಲವರು ಭಾಗಿ