ಶಿವಮೊಗ್ಗ: ಸಾವರ್ಕರ್ ಫ್ಲೆಕ್ಸ್ ಹರಿದು ಹಾಕಿದ ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡಿದ್ದೇವೆ. ಈಗ ಅವರ ಫೋಟೋ ಹರಿಯುವ ಧೈರ್ಯವನ್ನು ಯಾರೂ ಮಾಡಲ್ಲ ಎಂದು ಕೆ.ಎಸ್.ಈಶ್ವರಪ್ಪ ಗುಡುಗಿದರು.
ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ನಡೆದ ಸಾವರ್ಕರ್ ಸಾಮ್ರಾಜ್ಯ ಎಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾವರ್ಕರ್ ಒಬ್ಬ ಅಪ್ರತಿಮ ದೇಶ ಭಕ್ತ. ಅಂತಹವರ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ನಮ್ಮ ತಂಟೆಗೆ ಬರುವವರನ್ನು ಸುಮ್ಮನೆ ಬಿಡಲ್ಲ ಎಂಬ ಸಂದೇಶ ಈ ವೇದಿಕೆಯಿಂದ ಹೋಗಲಿ ಎಂದರು.
ಸಾವರ್ಕರ್ ಅಂದು ಮಾಡಿದ ಬಲಿದಾನ ಇಂದು ಸಮಾಜವನ್ನು ಜಾಗೃತಿಗೊಳಿಸಿದೆ. ಅಂದು ಸಾವರ್ಕರ್ರವರಿಗೆ ಹಿಂಸೆ ನೀಡಲಾಗುತ್ತಿತ್ತು. ಅವರಿಗಾಗಿ ಮಿಡಿಯುವ ಹೃದಯಗಳು ಕೈ ಹಿಸುಕಿಕೊಳ್ಳುವಂತಾಗಿತ್ತು. ಈಗ ಅದೇ ಕೈಗಳು ಜೈಕಾರ ಹಾಕುತ್ತಿವೆ ಎಂದು ಹೇಳಿದರು.
ವಿನಾಯಕ ದಾಮೋದರ ಸಾವರ್ಕರ್ರವರ ಸಹೋದರನ ಮೊಮ್ಮಗ ಸಾತ್ಯಕಿ ಸಾವರ್ಕರ್ ಮಾತನಾಡಿ, ಕಾರ್ಯಕ್ರಮದ ಮೂಲಕ ದೇಶಭಕ್ತರನ್ನು ಎಚ್ಚರಿಸುವ ಕೆಲಸವಾಗಬೇಕು. ಸಾವರ್ಕರ್ ಹೊಂದಿದ್ದ ಧ್ಯೇಯೋದ್ದೇಶಗಳನ್ನು ನಾಡಿನೆಲ್ಲೆಡೆ ಮತ್ತೆ ಪಸರಿಸಬೇಕಿದೆ. ಇಂದು ಕೂಡ ಅನೇಕ ದುಷ್ಟ ಶಕ್ತಿಗಳು ದೇಶದ ಮೇಲೆ ಆಕ್ರಮಣ ಮಾಡಲು ಹೊಂಚು ಹಾಕುತ್ತಿವೆ ಎಂದರು.
ವಾಗ್ಮಿ ಶ್ರೀಲಕ್ಷ್ಮಿ ರಾಜಕುಮಾರ್, ಮುನಿಯಪ್ಪಾಜಿ, ಮಾಜಿ ಸಭಾಪತಿ ಡಿ.ಎಸ್.ಶಂಕರಮೂರ್ತಿ, ಪರಿಷತ್ ಸದಸ್ಯ ಡಿ.ಎಸ್.ಅರುಣ್, ಸಾಮಗಾನ ಸಂಸ್ಥೆಯ ಗೌರವಾಧ್ಯಕ್ಷ ಕೆ.ಈ.ಕಾಂತೇಶ್ ಇದ್ದರು.
ಇದನ್ನೂ ಓದಿ: ಭೂತಕೋಲ ಆಚರಣೆ ಬಗ್ಗೆ ವಿವಾದಾತ್ಮಕ ಹೇಳಿಕೆ.. ಬೆಂಗಳೂರಲ್ಲಿ ನಟ ಚೇತನ್ ವಿರುದ್ಧ ಎಫ್ಐಆರ್