ಶಿವಮೊಗ್ಗ: ಹೈದರಾಬಾದ್‌ನಲ್ಲಿ ಪಶು ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಶಿವಮೊಗ್ಗದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆ ಪ್ರತಿಭಟನೆ ನಡೆಸಿದೆ.
ಅಮೀರ್ ಅಹ್ಮದ್ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿವರೆಗೂ ಸಾಗಿತು. ಹೈದರಬಾದ್‌ನಲ್ಲಿ ನಡೆದ ಅತ್ಯಾಚಾರ, ಕೊಲೆ ಪ್ರಕರಣ ಪ್ರಜಾತಂತ್ರವೇ ತಲೆ ತಗ್ಗಿಸುವಂತಹದ್ದಾಗಿದೆ. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಅಂತಾ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸಿದರು.
ದೇಶದಲ್ಲಿ ತಿಂಗಳ ಮಗುವಿನಿಂದ ಹಿಡಿದು 60 ವರ್ಷದ ಮಹಿಳೆಯರ ಮೇಲೂ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಲೇ ಇದೆ. ಇದರಿಂದ ಮಹಿಳೆ ಎಷ್ಟು ಸುರಕ್ಷಿತಳು ಎಂಬ ಅನುಮಾನ ಸಮಾಜವನ್ನು ಕಾಡುತ್ತಿದೆ. ನಿರ್ಭಯ, ಕಟುವಾ, ಉನ್ನಾವ ಹಾಗೂ ಇತರೆ ಅತ್ಯಾಚಾರ ಪ್ರಕರಣಗಳಲ್ಲಿ ಬೇಗನೇ ವಿಚಾರಣೆ ನಡೆಸಿ ತೀರ್ಪು ಬಂದಿದ್ದರೆ ಇಂತಹ ಪ್ರಕರಣಗಳು ಮರುಕಳಿಸುತ್ತಿರಲಿಲ್ಲ. ಹೀಗಾಗಿ ಇಂತಹ ಕೃತ್ಯಗಳನ್ನು ಪ್ರತ್ಯೇಕ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಬೇಗನೆ ಪಾಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಅತ್ಯಾಚಾರ ಪ್ರಕರಣಗಳಲ್ಲಿ ವಿಚಾರಣೆ ವಿಳಂಬವಾಗುತ್ತಿರುವುದರಿಂದ ಆರೋಪಿಗಳು ಬಚಾವ್ ಆಗುತ್ತಿದ್ದಾರೆ. ಶ್ರೀಮಂತ ಹಾಗೂ ರಾಜಕಾರಣಿಗಳ ಪ್ರಭಾವದಿಂದ ಜನ ಶಿಕ್ಷೆಯಿಂದ ಪರಾಗುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.