ಶಿವಮೊಗ್ಗ: ಇಲ್ಲಿನ ಕೇಂದ್ರ ಕಾರಾಗೃಹ ತರಕಾರಿ ಬೆಳೆಯಲ್ಲಿ ಸ್ವಾವಲಂಬನೆಯತ್ತಾ ದಾಪುಗಾಲಿಟ್ಟಿದೆ. ಶಿವಮೊಗ್ಗ ತಾಲೂಕು ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿನ ಜಾಗವನ್ನು ಬಳಸಿ ವಿವಿಧ ತರಕಾರಿಗಳನ್ನು ಬೆಳೆಯಲಾಗುತ್ತಿದೆ.
ಕಾರಾಗೃಹದಲ್ಲಿ ಸುಮಾರು 500 ಖೈದಿಗಳಿದ್ದಾರೆ. ಇವರಿಗೆ ಪ್ರತಿ ದಿನ ಸಾಕಷ್ಟು ತರಕಾರಿ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ಪಿ ರಂಗನಾಥ್ ಅವರು ಕಾರಾಗೃಹದ ಸುತ್ತ ಖಾಲಿ ಇರುವ ತಮ್ಮದೇ ಜಮೀನಿನಲ್ಲಿ ತರಕಾರಿ ಬೆಳೆಯಲು ಪ್ರಾರಂಭಿಸಿದ್ದಾರೆ. ಕಾರಾಗೃಹದಲ್ಲಿ ಬೆಳಗ್ಗೆ ಹಾಗೂ ಮಧ್ಯಾಹ್ನ ಅಡುಗೆ ಮಾಡಲಾಗುತ್ತದೆ. ಇಲ್ಲಿ ನಿಯಮದ ಪ್ರಕಾರ ಪ್ರತಿನಿತ್ಯ ಖೈದಿಗಳಿಗೆ ವಿವಿಧ ರೀತಿಯ ತರಕಾರಿಗಳಿಂದ ಮಾಡಿದ ಅಡುಗೆಯನ್ನು ನೀಡಬೇಕು. ಈ ನಿಟ್ಟಿನಲ್ಲಿ ತರಕಾರಿ ಬೆಳೆಯಲು ಪ್ರಾರಂಭಿಸಲಾಗುತ್ತಿದೆ.
4 ಎಕರೆಯಲ್ಲಿ ವಿವಿಧ ತರಕಾರಿಗಳನ್ನು ಬೆಳೆಯಲಾಗುತ್ತಿದೆ : ಕೇಂದ್ರ ಕಾರಾಗೃಹದ ಸುತ್ತ 20 ಎಕರೆ ಭೂಮಿ ಇದೆ. ಈಗ ಸದ್ಯ 4 ಎಕರೆಯಲ್ಲಿ ವಿವಿಧ ತರಕಾರಿಗಳನ್ನು ಬೆಳೆಯಲಾಗುತ್ತಿದೆ. ಇದರಲ್ಲಿ ಎರಡು ಎಕರೆ ಜೈಲಿನ ಹಿಂಭಾಗ ಹಾಗೂ ಎರಡು ಎಕರೆ ಜೈಲಿನ ಮುಂಭಾಗದಲ್ಲಿ ತರಕಾರಿ ಬೆಳೆಯಲಾಗುತ್ತಿದೆ. ಇಲ್ಲಿ ಟೊಮ್ಯಾಟೊ, ಬೆಂಡೆಕಾಯಿ, ಜವಳಿಕಾಯಿ, ಹಿರೇಕಾಯಿ, ಸೌತೆಕಾಯಿ, ಬೀನ್ಸ್, ಮೂಲಂಗಿ ಬೆಳೆಯಲಾಗುತ್ತಿದೆ. ಜೊತೆಗೆ ಪಾಲಕ್ ಸೊಪ್ಪು, ಅರಿಬೆ ಸೊಪ್ಪು ಬೆಳೆಯಲಾಗುತ್ತಿದೆ. ತರಕಾರಿ ಜೊತೆ ಉಳಿದ ಜಾಗದಲ್ಲಿ ತೆಂಗು, ಸಪೋಟ ಹಾಗೂ ಬಾಳೆ ಬೆಳೆಯುವ ಯೋಜನೆ ಇದೆ. ಈ ಕುರಿತು ತೋಟಗಾರಿಕಾ ಇಲಾಖೆಯ ಜೊತೆ ಮಾತುಕತೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇರುವ ಭೂಮಿಯನ್ನು ಬಳಸಿಕೊಂಡು ಉತ್ತಮ ತೋಟ ಮಾಡುವ ಗುರಿಯನ್ನು ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ಪಿ ರಂಗನಾಥ್ ಹೊಂದಿದ್ದಾರೆ.
ಎರೆಹುಳು ಗೊಬ್ಬರ ತಯಾರಿ : ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಖೈದಿಗಳು ಎರೆಹುಳ ಗೊಬ್ಬರ ತಯಾರು ಮಾಡುತ್ತಿದ್ದಾರೆ. ಸುಮಾರು 10x10 ಆಳ ಅಗಲದ ಗುಂಡಿಯಲ್ಲಿ ಎರೆಹುಳ ಗೊಬ್ಬರ ತಯಾರು ಮಾಡಲಾಗುತ್ತಿದೆ. ಇದನ್ನೇ ತಮ್ಮ ಬೆಳೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ.
ಖೈದಿಗಳಿಂದಲೇ ತೋಟಗಾರಿಕೆ ಕೆಲಸ : ಇಲ್ಲಿ ಪ್ರತಿ ದಿನ ಸಜಾ ಬಂಧಿಗಳು ಬಂದು ತೋಟದ ಕೆಲಸ ಹಾಗೂ ತರಕಾರಿ ಬೆಳೆಯುವ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ. ಇವರು ಬೆಳಗ್ಗೆ 8 ಗಂಟೆಗೆ ಬಂದು ಸಂಜೆ 5 ಗಂಟೆಯ ತನಕ ಕೆಲಸ ಮಾಡುತ್ತಾರೆ. ಇಲ್ಲಿ ಖೈದಿಗಳ ತಂಡ ರಚನೆ ಮಾಡಿ, ಆಯಾ ತಂಡಕ್ಕೆ ಬೇರೆ ಬೇರೆ ಕೆಲಸವನ್ನು ವಹಿಸಲಾಗಿರುತ್ತದೆ. ಕೆಲವರಿಗೆ ತರಕಾರಿ ತೋಟಕ್ಕೆ ಕಳುಹಿಸಿದ್ರೆ, ಮತ್ತೆ ಕೆಲವರು ಎರೆಹುಳ ಗೊಬ್ಬರ ತಯಾರಿಯಲ್ಲಿರುತ್ತಾರೆ. ಇಲ್ಲಿ ಸಿಗುವ ಎಲ್ಲಾ ತರಕಾರಿಗಳು ತಾಜಾ ಹಾಗೂ ರಾಸಾಯನಿಕ ಮುಕ್ತವಾಗಿರುವುದು ವಿಶೇಷವಾಗಿದೆ. ಎರಡು ತೋಟವನ್ನು ಜೈಲಿನ ಸಿಬ್ಬಂದಿಯಾದ ಶ್ರೀಮಂತ ಪಾಟೀಲ್ ಹಾಗೂ ರವೀಂದ್ರ ಅವರು ನೋಡಿ ಕೊಳ್ಳುತ್ತಾರೆ.
ತರಕಾರಿ ಮಾರುಕಟ್ಟೆಯಲ್ಲಿ ಮಾರುವ ಉದ್ದೇಶ : ಕಾರಾಗೃಹಕ್ಕೆ ಪ್ರತಿದಿನ ಸುಮಾರು 60 ಕೆಜಿ ತರಕಾರಿ ಬೇಕಾಗುತ್ತದೆ. ಇದರಿಂದ ಮುಂದೆ ಖಾಲಿ ಇರುವ ಜಾಗದಲ್ಲಿ ತರಕಾರಿಯನ್ನು ಬೆಳೆಯುವ ಉದ್ದೇಶವನ್ನು ಹೊಂದಲಾಗಿದೆ. ಇಲ್ಲಿ ಕಾರಾಗೃಹಕ್ಕೆ ಬೇಕಾದಷ್ಟು ಇಟ್ಟುಕೊಂಡು ಉಳಿದ ತರಕಾರಿಯನ್ನು ಮಾರುಕಟ್ಟೆಗೆ ಮಾರಾಟ ಮಾಡಲು ಉದ್ದೇಶ ಹೊಂದಲಾಗಿದೆ. ಶಿವಮೊಗ್ಗದ ಹಳೇ ಜೈಲಿನಲ್ಲಿ ತರಕಾರಿ ಬೆಳೆದು ಅದನ್ನು ಹೊರಗಡೆ ಮಾರಾಟಕ್ಕೆ ಕಳುಹಿಸಲಾಗುತ್ತಿತ್ತು. ಇಲ್ಲಿ ಸಜಾ ಬಂಧಿಗಳು ನಗರಕ್ಕೆ ತರಕಾರಿ ತಂದು ಮಾರಾಟ ಮಾಡಿ ನಂತರ ವಾಪಸ್ ಆಗುತ್ತಿದ್ದರು. ಹಳೇ ಜೈಲು ಇಷ್ಟು ಪ್ರಸಿದ್ಧಿ ಪಡೆದಿತ್ತು. ಈಗ ಅದೇ ಹೆಸರನ್ನು ಉಳಿಸುವ ನಿಟ್ಟಿಯಲ್ಲಿ ಪ್ರಯತ್ನ ನಡೆಸಲಾಗುತ್ತಿದೆ. ಅಲ್ಲದೆ ಡಿಸಿ ಕಚೇರಿ ಹಾಗೂ ಜಿಲ್ಲಾ ಕೋರ್ಟ್ ಹಿಂಭಾಗದಲ್ಲಿ ಅನುಮತಿ ಪಡೆದು ತರಕಾರಿ ಮಾರಾಟ ಮಾಡುವ ಉದ್ದೇಶವಿದೆ ಎನ್ನುತ್ತಾರೆ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ಪಿ ರಂಗನಾಥ್ ಅವರು.