ಶಿವಮೊಗ್ಗ: ನಗರದಲ್ಲಿ ನಡೆದ ಪ್ರತ್ಯೇಕ ಪ್ರಕರಣದಲ್ಲಿ ಹಿಂದೂ ಯುವಕರಿಬ್ಬರ ಮೇಲೆ ಅನ್ಯ ಕೋಮಿನ ಯುವಕರು ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಗರದ ಮಥುರಾ ಪ್ಯಾರಾಡೈಸ್ ಮುಂಭಾಗ ಬಸ್ ನಿಲ್ದಾಣದಲ್ಲಿ ಸೋಮವಾರ ಸಂಜೆ ಬಸ್ಗಾಗಿ ಕಾಯುತ್ತಾ ನಿಂತಿದ್ದ ಕಾಲೇಜು ವಿದ್ಯಾರ್ಥಿನಿಯರಿಗೆ ಐವರು ಅನ್ಯ ಕೋಮಿನ ಯುವಕರು ಚುಡಾಯಿಸುತ್ತಿದ್ದರು. ಇದನ್ನು ಪ್ರಶ್ನಿಸಿದ ಹರ್ಷ ಎಂಬಾತನ ಮೇಲೆ ಯುವಕರು ಹಲ್ಲೆ ನಡೆಸಿ ಪರಾರಿಯಾಗಿದ್ಧಾರೆ. ನಂತರ ಹರ್ಷ ಮೆಗ್ಗಾನ್ ಆಸ್ಪತ್ರೆಗೆ ಬಂದು ದಾಖಲಾಗಿದ್ದಾನೆ. ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆ ಆರೋಪಿಗಳಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಅದೇ ರೀತಿಯಾಗಿ ನಗರದ ರಾಜೀವ್ ಗಾಂಧಿ ಬಡಾವಣೆಯ ನಿವಾಸಿ ಕಾಂತರಾಜು ಎಂಬ ಯುವಕನ ಮೇಲೆ ರಾತ್ರಿ ಸುಮಾರು 10.30ರ ಸುಮಾರಿಗೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಕಾಂತರಾಜು ಮನೆಯಿಂದ ಮೂತ್ರ ವಿಸರ್ಜನೆಗೆ ಎಂದು ಮನೆಯಿಂದ ಹೊರಕ್ಕೆ ಬಂದಾಗ ಮೂರರಿಂದ ಐದು ಜನರ ಗುಂಪು ಲಾಂಗು ಮಚ್ಚುಗಳಿಂದ ಏಕಾಏಕಿ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ವೇಳೆ, ಕಾಂತರಾಜು ತಪ್ಪಿಸಿಕೊಂಡು ಮನೆ ಕಡೆ ಓಡಿದ್ದಾನೆ. ಮನೆಗೂ ಬಂದು ಆರೋಪಿಗಳು ಹಲ್ಲೆಗೆ ಮುಂದಾಗಿದ್ದರು. ಆಗ ಕಾಂತರಾಜು ಆರೋಪಿಗಳ ಬಳಿಯಿದ್ದ ಮಾರಕಾಸ್ತ್ರಗಳನ್ನು ಪಡೆದು ಅವರ ಮೇಲೆಯೇ ಹಲ್ಲೆ ನಡೆಸಿ ಬಚಾವ್ ಆಗಿದ್ಧಾನೆ.
ಇದರಿಂದ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈತನ ಸ್ನೇಹಿತರ ಜೊತೆ ಗಾಯಾಳು ಕಾಂತರಾಜುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾನು ಭಜರಂಗದಳದಲ್ಲಿ ಗುರುತಿಸಿಕೊಂಡಿದ್ದು, ಇದಕ್ಕೆ ಕಾರಣಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನನ್ನ ಸ್ನೇಹಿತರ ಮೇಲೂ ಹಲ್ಲೆ ನಡೆಸುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎಂದು ಗಾಯಾಳು ಕಾಂತರಾಜು ದೂರಿದ್ದಾರೆ.
ಎರಡು ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್, ಈ ಘಟನೆಗಳ ಬಗ್ಗೆ ಪ್ರತ್ಯೇಕವಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಜಯನಗರ ಠಾಣಾ ವಾಪ್ತಿಯ ಘಟನೆ ಸಂಬಂಧ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಸಹ ನಡೆಸಲಾಗುತ್ತಿದೆ. ಕೋಟೆ ಠಾಣಾ ವಾಪ್ತಿಯ ಪ್ರಕರಣದಲ್ಲಿ ಈಗಾಗಲೇ ಮೂವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮೈಸೂರಲ್ಲಿ ಒಂಟಿ ಮನೆ ಬಾಡಿಗೆ ಪಡೆದು ವೇಶ್ಯಾವಾಟಿಕೆ; ದಾಳಿ ವೇಳೆ ನಾಲ್ವರು ಯುವತಿಯರ ರಕ್ಷಣೆ