ಶಿವಮೊಗ್ಗ: ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಗರ್ಭಿಣಿ ಮತ್ತು ಅವರ ಪತಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ ಶಿವಮೊಗ್ಗ ತಾಲೂಕಿನ ಬೇಡರ ಹೊಸಳ್ಳಿಯ ಕೆರೆ ಏರಿ ಮೇಲೆ ನಡೆದಿದೆ.
ಓಮಿನಿ ಹಾಗೂ ಐ-20 ಕಾರುಗಳು ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಚನ್ನಗಿರಿಯ ಆ್ಯಂಬುಲೆನ್ಸ್ ಚಾಲಕ ಧನಂಜಯ್ (35), ಇವರ ಪತ್ನಿ 8 ತಿಂಗಳ ಗರ್ಭಿಣಿ ರೋಜಾ (23), ಧನಂಜಯ್ ಸಹೋದರನ ಪತ್ನಿ ಗರ್ಭಿಣಿ ಚೇತನ, ಸುನೀತಾ ಹಾಗೂ ಇಂದಿರಮ್ಮ ಎಂಬುವವರು ಶಿವಮೊಗ್ಗದಿಂದ ಹೊಳಲೂರು ಕಡೆಯಿಂದ ಚನ್ನಗಿರಿ ಕಡೆಗೆ ಸಾಗುತ್ತಿದ್ದರು. ಹೂನ್ನಾಳಿ ಕಡೆಯಿಂದ ಐ20 ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು.
ಈ ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿ ಒಮಿನಿ ಕಾರಿನಲ್ಲಿದ್ದವರು ತೀವ್ರ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಪತಿ ಧನಂಜಯ್ ಸಾವನ್ನಪ್ಪಿದರೆ, ಪತ್ನಿ ರೋಜಾ ನಿನ್ನೆ ಮಧ್ಯರಾತ್ರಿ ಸಾವನ್ನಪ್ಪಿದ್ದಾರೆ. ಹೊಟ್ಟೆಯಲ್ಲಿದ್ದ ಮಗುವನ್ನು ಉಳಿಸಲು ಮೆಗ್ಗಾನ್ ಆಸ್ಪತ್ರೆಯ ವೈದ್ಯರು ಸಾಕಷ್ಟು ಪ್ರಯತ್ನ ಪಟ್ಟರೂ ಅವರ ಪ್ರಯತ್ನ ಸಫಲವಾಗಲಿಲ್ಲ.
ಇದನ್ನೂ ಓದಿ: ತುಮಕೂರು: ರಾಜಕಾಲುವೆ ಬಳಿ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆ
ನಿನ್ನೆ ಗರ್ಭಿಣಿ ರೋಜಾ ಹಾಗೂ ಧನಂಜಯ್ ಅವರ ಸಹೋದರನ ಪತ್ನಿ ಚೇತನರನ್ನು(ಗರ್ಭಿಣಿ) ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆ ತಂದು ವೈದ್ಯರ ತಪಾಸಣೆ ನಡೆಸಿ ವಾಪಸ್ ಆಗುವ ವೇಳೆ, ಈ ದುರ್ಘಟನೆ ನಡೆದಿದೆ. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.