ಶಿವಮೊಗ್ಗ: ಡಿ.ಕೆ.ಶಿವಕುಮಾರ್ ಅವರನ್ನು ಮತ್ತೆ ಇಡಿ ವಶಕ್ಕೆ ಪಡೆದಿರುವುದರಲ್ಲಿ ಯಾರ ಹಸ್ತಕ್ಷೇಪವು ಇಲ್ಲ, ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ಸ್ಥಿತಿಯಲ್ಲಿ ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ ಇಲ್ಲ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ತನಿಖೆಗೆ ಆದೇಶ ಮಾಡಿರುವುದು ನ್ಯಾಯಾಧೀಶರು, ಇದರಲ್ಲಿ ಯಾರ ಹಸ್ತಕ್ಷೇಪವು ಇಲ್ಲ. ಇಡಿಯವರಿಗೆ ಸಮಗ್ರ ಮಾಹಿತಿ ಸಿಕ್ಕಿಲ್ಲ ಅಂತ ಅನ್ನಿಸುತ್ತದೆ, ಸತ್ಯ ಹೇಳುವುದಕ್ಕೆ ಬಹಳ ಸಮಯ ಬೇಕಾಗುವುದಿಲ್ಲ. ಬಹಳ ಎಳೆದುಕೊಂಡು ಹೋಗುವುದು ಒಳ್ಳೆಯದಲ್ಲ. ಇರುವ ಸತ್ಯ ಹೇಳಿ ಬಿಟ್ರೆ ಅವರ ತನಿಖಾ ಹಂತವೂ ಪೂರ್ಣಗೊಳ್ಳುತ್ತದೆ ಇಡಿಯವರು ಸಮಾಧನಾ ಆಗುತ್ತಾರೆ. ಇವರೂ ಕಷ್ಟದಿಂದ ಪರಾಗಬಹುದು. ಇಡಿ ತನಿಖೆ ಮುಗಿಸಿ ಮುಂದಿನ ತನಿಖೆ ಎದುರಿಸಲು ತಯಾರಾಗಬಹುದು ಎಂದು ಮಾರ್ಮಿಕವಾಗಿ ನುಡಿದರು.
ಭ್ರಷ್ಚಚಾರಿಗಳಿಗೆ ಜಾತಿ ಇಲ್ಲ. ಸಮಾಜದ ಹಿತ ಬಯಸಿದವರನ್ನು, ಸಮಾಜಕ್ಕೆ ಕೆಲಸ ಮಾಡಿದವರನ್ನು ಐಕಾನ್ ಅಂತ ನೋಡ್ತಾರೆ. ನಾವು ನಿನ್ನೆ ನಮ್ಮ ಆದಾಯ 20 ಲಕ್ಷ ಇದ್ದು, ಇವತ್ತು 20 ಕೋಟಿ ಅಂದ್ರೆ, ವರ್ತಮಾನದಲ್ಲಿ ಕೆಲವು ಭಟ್ಟಂಗಿಗಳು ಹೊಗಳಬಹುದು. ಹಣದಿಂದ ಕೆಲವೊಮ್ಮೆ ನಮ್ಮನ್ನು ಬೂಸ್ಟ್ ಮಾಡಿಕೊಳ್ಳಬಹುದು. ಆದರೆ, ಭವಿಷ್ಯ ಆಗಲಿ ವರ್ತಮಾನ ಅಗಲಿ ನಮ್ಮನ್ನು ನಾಯಕ ಅಂತ ಒಪ್ಪಿಕೊಂಡಿರುವ ಉದಾಹರಣೆಗಳಿಲ್ಲ. ಕೆಂಪೇಗೌಡರು ಒಕ್ಕಲಿಗರಿಗೆ, ಬಸವಣ್ಣ ಲಿಂಗಾಯತರಿಗೆ, ಕನಕ ಕುರುಬರಿಗೆ ಅಂತ ನೋಡುವುದೇ ನಮ್ಮ ಸಂಕುಚಿತ ಮನೋಭಾವನೆ. ಅವರೆಲ್ಲಾ ಜಾತಿ ಮೀರಿ ಬೆಳೆದವರು. ಕೆಂಪೇಗೌಡರು ಬೆಂಗಳೂರು ಕಟ್ಟುವಾಗ ಒಕ್ಕಲಿಗರೆ ಇರಿ ಎಂದು ಠರಾವು ಹೊರಡಿಸಿದ್ರಾ ಎಂದು ಪ್ರಶ್ನೆ ಮಾಡಿದರು. ನಾವೆಲ್ಲಾ ಒಂದು ಜಾತಿಯಲ್ಲಿ ಹುಟ್ಟಿರಬಹುದು, ಆದರೆ ಜಾತಿ ಮೀರಿ ವ್ಯಕ್ತಿತ್ವ ಬೆಳೆಸಿಕೊಂಡವರು. ಮಹಾನ್ ನಾಯಕರನ್ನು ಜಾತಿಯಿಂದ ಅಳೆಯುವುದು ನಮ್ಮ ಸಂಕುಚಿತ ಮನೋಭಾವನೆ ಎಂದರು.
ಮಾಜಿ ಸಿಎಂ ಹೆಚ್ ಡಿ.ಕೆಗೆ ಟಾಂಗ್: ಇನ್ನೂ ಬ್ಯಾಂಕಿಂಗ್ ಪರೀಕ್ಷೆ ಕನ್ನಡದಲ್ಲಿ ಆಗುತ್ತಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಟ್ವಿಟ್ಗೆ ಪ್ರತಿಕ್ರಿಯೆ ನೀಡಿದ ಅವರು, ಹೆಚ್ಡಿಕೆ ಈಗ ಹೇಳುತ್ತಿರುವುದು ಹಿಂದೆ ಪರೀಕ್ಷೆ ಕನ್ನಡದಲ್ಲಿ ಆಗುತ್ತಿತ್ತು. ಈಗ ಆಗುತ್ತಿಲ್ಲ ಎಂಬಂತಿದೆ. ಅವರ ತಂದೆ ದೇವೆಗೌಡರು ಪ್ರಧಾನಿಯಾಗಿದ್ದಾಗಲೂ ಸಹ ಕನ್ನಡದಲ್ಲಿ ಪರೀಕ್ಷೆ ಆಗಿರಲಿಲ್ಲ. ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ನಡೆಯಬೇಕು ಎಂದು ಹೇಳುವುದರಲ್ಲಿ ನಾನು ಮೊದಲಿಗ. ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡಬೇಕು ಅಂತ ಪ್ರತಿಪಾದಿಸುವವನು ನಾನು ಎಂದರು.
ಈಶ್ವರ್ ಖಂಡ್ರೆಗೆ ತೀಕ್ಷ್ಣ ಪ್ರತಿಕ್ರಿಯೆ: ನೆರೆ ಪರಿಹಾರ ತರುವುದಕ್ಕೆ ತಾಕತ್ ಬೇಕು ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ರವಿ, ತಾಕತ್ ಬೇಕಾಗಿರುವುದು ಅಖಾಡದಲ್ಲಿ, ಪರಿಹಾರದ ನೆರವು ತರಲು ತಾಳ್ಮೆ, ವಿಶ್ವಾಸ ಇರಬೇಕು ಎಂದರು. ಪ್ರಧಾನ ಮಂತ್ರಿಗಳು ಒಂದೂ ಸೀಟನ್ನು ನೀಡದ ಕೇರಳ, ತಮಿಳು ನಾಡಿಗೆ ಅನ್ಯಾಯ ಮಾಡಿಲ್ಲ, ಇನ್ನು 25 ಸೀಟು ನೀಡಿದ ಕರ್ನಾಟಕಕ್ಕೆ ಹೇಗೆ ಅನ್ಯಾಯ ಮಾಡ್ತಾರೆ ಎಂದು ಪ್ರಶ್ನಿಸಿದರು.