ಶಿವಮೊಗ್ಗ: ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ಸುಣ್ಣದಹಳ್ಳಿಯಲ್ಲಿ ದೀಪಾವಳಿ ಹಬ್ಬದ ದಿನ ಬುಧವಾರ ಆಕಸ್ಮಿಕವಾಗಿ ಪಟಾಕಿ ಸಿಡಿದು ಒಬ್ಬ ಮೃತಪಟ್ಟು, ಮೂವರು ಬಾಲಕರು ಗಾಯಗೊಂಡಿದ್ದರು. ಗಾಯಗೊಂಡ ಇಬ್ಬರು ಬಾಲಕರಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ, ಇನ್ನೊಬ್ಬನಿಗೆ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತರಿಕೆರೆ ತಾಲೂಕು ಸುಣ್ಣದ ಹಳ್ಳಿಯ ಪ್ರದೀಪ್(30) ಎಂಬಾತನು ಮೃತ ದುರ್ದೈವಿ . ಮನೆಯಲ್ಲಿ ಪ್ರದೀಪ್ ಅವರು ಗ್ರಾಮೀಣ ಭಾಗದಲ್ಲಿ ಬಳಸುವ ಅಕಡೆಗೋಟು (ಕಲ್ಲ ಅಟಂಬಾಂಬ್) ಪಟಾಕಿ ಹಿಡಿದು ಕುಳಿತಿದ್ದರು. ಈ ಪಟಾಕಿ ಆಕಸ್ಮಿಕವಾಗಿ ಸಿಡಿದು ಪ್ರದೀಪ್ ದೇಹದ ಅತಿಸೂಕ್ಷ್ಮ ಭಾಗಕ್ಕೆ ತೀವ್ರ ಗಾಯಗಳಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪಟಾಕಿ ಸಿಡಿದಾಗ ಮನೆಯಲ್ಲಿ ಮೂವರು ಮಕ್ಕಳಿದ್ದರು. ಅವರೆಲ್ಲರೂ ದೀಪಾವಳಿ ಹಬ್ಬ ಮಾಡಲು ತಮ್ಮ ಅಜ್ಜನ ಮನೆಗೆ ಬಂದಿದ್ದರು. ಈ ವೇಳೆ ಪಟಾಕಿ ಅವಘಡ ನಡೆದಿದೆ. ಪ್ರದೀಪ್ ಮನೆಯಲ್ಲಿ ಕುರ್ಚಿಯ ಕೆಳಗೆ ಪಟಾಕಿ ಹಿಡಿದುಕೊಂಡು ಕುಳಿತಿದ್ದಾಗ ಸಿಡಿದಿದೆ. ಇದು ಪ್ರದೀಪ್ ಅವರ ಮನೆಯ ಅವಘಡಕ್ಕೆ ಕಾರಣವಾಗಿದೆ. ಮನೆಯಲ್ಲಿ ಆಟವಾಡುತ್ತಿದ್ದ ಮೂವರು ಬಾಲಕರಿಗೂ ಗಾಯಗಳಾಗಿವೆ. ಗಾಯಗೊಂಡಿದ್ದ ಬಾಲಕರನ್ನು ತಕ್ಷಣ ತರಿಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಲ್ಲಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಇಬ್ಬರು ಬಾಲಕರಿಗೆ ಮೆಗ್ಗಾನ್ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಬ್ಬ ಬಾಲಕ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅಜ್ಜ ರುದ್ರಯ್ಯ ಮಾತನಾಡಿ, ನಮ್ಮ ಮೊಮ್ಮಕ್ಕಳು ಮನೆಯಲ್ಲಿ ಆಟವಾಡುವ ವೇಳೆ ಬೇರೆಯವರು ಸಿಡಿಸಿದ ಪಟಾಕಿಯಿಂದ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂಓದಿ:ಬೆಂಗಳೂರಲ್ಲಿ ಮತ್ತೆ ಹುಸಿ ಬಾಂಬ್ ಕರೆ: ಕಂಪನಿಯನ್ನು ಬೆಚ್ಚಿಬೀಳಿಸಿದ ಮಹಿಳಾ ಮಾಜಿ ಉದ್ಯೋಗಿ!